ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯ ಶಿಕ್ಷಾರ್ಹ: ಅಭಯ್ ಧನಪಾಲ್ ಚೌಗುಲೆ

Prasthutha|

ಮಂಗಳೂರು: ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯವು ಶಿಕ್ಷಾರ್ಹವಾಗಿದೆ. ಅಂತಹ ತಪ್ಪುಗಳು ಸಂಭವಿಸಿವೆ ಎಂದು ತಿಳಿದ ಕೂಡಲೇ ಮಕ್ಕಳು ತಮ್ಮ ಪೋಷಕರ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬಹುದಾಗಿದೆ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮತ್ತು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಪ್ರಸಕ್ತ ಖಾಯಂ ಲೋಕ ಅದಾಲತ್ ಅಧ್ಯಕ್ಷ ಅಭಯ್ ಧನಪಾಲ್ ಚೌಗುಲೆ ಹೇಳಿದ್ದಾರೆ.

- Advertisement -

ಅವರು ಶನಿವಾರ ಮುಲ್ಕಿಯ ಕಿಲ್ಪಡಿಯ ಎಂ. ಸಿ. ಟಿ (M.C.T) ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ‘ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತ ಮಾಹಿತಿ ಕಾರ್ಯಾಗಾರ’ದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಕ್ಕಾಗಿಯೇ ಭಾರತ ಸರಕಾರ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಈ ಮೂಲಕ ಅಪ್ರಾಪ್ತ ವಯಸ್ಕರ ಮೇಲೆ ಆಗುವ ಲೈಂಗಿಕ ದೌರ್ಜನ್ಯ ಎಸಗುವ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸುವ ಅವಕಾಶವಿದೆ. ಮಕ್ಕಳು ಇಂತಹ ಕಾಯ್ದೆಗಳ ಬಗ್ಗೆ ಅರಿತು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.

- Advertisement -

ಬಾಲ್ಯವಿವಾಹ ಅನ್ನೋದು ಬಹುದೊಡ್ಡ ಸಾಮಾಜಿಕ ಪಿಡುಗು ಆಗಿದ್ದು, ಮಕ್ಕಳ ಭವಿಷ್ಯಕ್ಕೆ ಆತಂಕವಾಗಿದೆ. ಎಳೆಯ ಪ್ರಾಯದಲ್ಲಿಯೇ ಮಕ್ಕಳನ್ನು ಮದುವೆಗೆ ಒಪ್ಪಿಸುವುದು ಕೂಡಾ ಶಿಕ್ಷಾರ್ಹ ಅಪರಾಧ. ಇಂತಹ ಘಟನೆ ನಡೆಯುತ್ತಿದೆ ಎಂದು ಗೊತ್ತಾದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಇಂತಹ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಸಮಾಜ ಕೈ ಜೋಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಕೀಲ ಹಾಗೂ ಖಾಯಂ ಲೋಕ ಅದಾಲತ್ ಸದಸ್ಯ ಫಝಲ್ ರಹಿಮಾನ್, ಮಂಗಳೂರಿನ ವಕೀಲ ಮಹಮ್ಮದ್ ಅಸ್ಗರ್ ಮುಡಿಪು, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಎಂ.ಬಿ ಖಾನ್, ಉಪಾಧ್ಯಕ್ಷ ಅಡ್ವಕೇಟ್ ಒಮರ್ ಫಾರೂಕ್ ಮುಲ್ಕಿ, ಸಂಚಾಲಕ ಹಾಜಿ ಎಚ್ ಅಬೂಬಕ್ಕರ್, ಕಾರ್ಯದರ್ಶಿ ಅಬೂಸಾಲಿ ಹಾಜಿ, ಶಾಲಾ ಮುಖ್ಯ ಶಿಕ್ಷಕ ಹರೀಶ್ ಬಂಗೇರ ಉಪಸ್ಥಿತರಿದ್ದರು.

ಅತಿಥಿಗಳನ್ನು ಕುಮಾರಿ ಕೃತಿಕಾ ಸ್ವಾಗತಿಸಿದರೆ, ಕುಮಾರಿ ಸನಾ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಪ್ರಿಯಾಂಕ ನಿರ್ವಹಿಸಿದರು.



Join Whatsapp
Exit mobile version