ಭೋಪಾಲ್: ವಿವಾದಿತ ಬಾಲಿವುಡ್ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ನ ಆದಾಯವನ್ನು ಬ್ರಾಹ್ಮಣ ಮಕ್ಕಳ ಶಿಕ್ಷಣ ಮತ್ತು ಕಾಶ್ಮೀರದಲ್ಲಿ ಅವರಿಗೆ ಮನೆಗಳನ್ನು ನಿರ್ಮಿಸಲು ಬಳಸುವಂತೆ ಚಿತ್ರದ ನಿರ್ಮಾಪಕರಿಗೆ ಮಧ್ಯಪ್ರದೇಶದ IAS ಅಧಿಕಾರಿ ನಿಯಾಝ್ ಖಾನ್ ಸಲಹೆ ನೀಡಿದ್ದಾರೆ.
ಭಾರತದ ವಿವಿಧ ರಾಜ್ಯಗಳಲ್ಲಿ ದುಷ್ಕರ್ಮಿಗಳ ದ್ವೇಷಕ್ಕೆ ಬಲಿಯಾದ ಸಾವಿರಾರು ಮುಸ್ಲಿಂ ಅಮಾಯಕರ ಕುರಿತು ಕೂಡ ಚಿತ್ರ ನಿರ್ಮಿಸುವಂತೆ ನಿಯಾಝ್ ಖಾನ್ ಇದೇ ವೇಳೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ಮಾಪಕರನ್ನು ಆಗ್ರಹಿಸಿದ್ದಾರೆ.
‘ಅಲ್ಪಸಂಖ್ಯಾತ ಸಮುದಾಯದವರು ಕೀಟಗಳಲ್ಲ, ಅವರೂ ಈ ದೇಶದ ಪ್ರಜೆಗಳಾಗಿದ್ದಾರೆ. ಮುಸ್ಲಿಮರ ಹತ್ಯಾಕಾಂಡದ ಕುರಿತು ಪುಸ್ತಕವೊಂದನ್ನು ಬರೆಯಲು ಆಲೋಚಿಸುತ್ತಿರುವುದಾಗಿ ಹೇಳಿರುವ ಅಧಿಕಾರಿ, ಮುಸ್ಲಿಮರು ಅನುಭವಿಸುತ್ತಿರುವ ನೋವುಗಳನ್ನು ಭಾರತೀಯರ ಮುಂದೆ ತೆರೆದಿಡಲು ‘ದಿ ಕಾಶ್ಮೀರ್ ಫೈಲ್ಸ್’ ನಂತಯೇ ಚಲನಚಿತ್ರವನ್ನು ನಿರ್ಮಿಸಲು ಯಾರಾದರೂ ಮುಂದೆ ಬರಬೇಕಿದೆ ಎಂದಿದ್ದಾರೆ. ಆದರೆ IAS ಅಧಿಕಾರಿಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸಚಿವ ವಿಶ್ವಾಸ್ ಸಾರಂಗ್’ ಅಧಿಕಾರಿಯ ಟ್ವೀಟ್’ಗಳು “ಫಿರ್ಕಾಪರಸ್ತ್” (ಪಂಥೀಯ) ಆಗಿದ್ದು, ಅವರನ್ನು ಉಪ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.