Home ಟಾಪ್ ಸುದ್ದಿಗಳು ಅಮಿತ್ ಶಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ, ಸುಡುವ ‘ಗುಜರಾತ್ ಮಾದರಿ’...

ಅಮಿತ್ ಶಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ, ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಮತ್ತು ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.


ಮುಸ್ಲಿಮರಿಗೆ ಮೀಸಲಾತಿ ನೀಡಲು ಒಕ್ಕಲಿಗರ ಇಲ್ಲವೇ ಲಿಂಗಾಯತರ ಮೀಸಲಾತಿಯನ್ನು ಕಡಿತಗೊಳಿಸುತ್ತೀರಾ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಯಲ್ಲಿಯೇ ಜಾತಿ-ಜಾತಿ ಮತ್ತು ಧರ್ಮ-ಧರ್ಮದ ನಡುವೆ ಜಗಳ ಹಚ್ಚುವ ದುಷ್ಟ ಆಲೋಚನೆ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳದಷ್ಟು ಕರ್ನಾಟಕದ ಜನತೆ ದಡ್ಡರಲ್ಲ. ಈ ರಾಜ್ಯದ ಒಕ್ಕಲಿಗರು ಮತ್ತು ಲಿಂಗಾಯತರು ಸೇರಿದಂತೆ ಈ ರಾಜ್ಯದ ಮಹಾ ಜನತೆ ‘ಕಿತ್ತು ತಿನ್ನುವ ದುಷ್ಟರಲ್ಲ’, ‘ಹಂಚಿ ತಿನ್ನುವ ಔದಾರ್ಯ ಸಜ್ಜನರು’ ಎನ್ನುವುದನ್ನು ಅಮಿತ್ ಶಾ ಅವರಿಗೆ ವಿನಮ್ರವಾಗಿ ತಿಳಿಸಬಯಸುತ್ತೇನೆ ಎಂದು ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ಪಕ್ಷದ ವಿರೋಧ ಇಲ್ಲ. ನಮ್ಮ ಪಕ್ಷ ಮೀಸಲಾತಿ ಹೆಚ್ಚಳದ ಪರವಾಗಿದೆ. ಬಿಜೆಪಿ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನಷ್ಟೇ ವಿರೋಧಿಸುತ್ತಿದ್ದೇವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದೊಂದೇ ಈಗಿನ ಮೀಸಲಾತಿಯ ಗೊಂದಲ-ವಿವಾದವನ್ನು ಪರಿಹರಿಸಲು ಇರುವ ಸರಿಯಾದ ಮಾರ್ಗ. ಮೀಸಲಾತಿಗೆ ಈಗ ವಿಧಿಸಲಾಗಿರುವ ಶೇಕಡಾ 50ರ ಮಿತಿ ಸಂವಿಧಾನದಲ್ಲಿ ಹೇರಲಾದ ಮಿತಿ ಅಲ್ಲ, ಅದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗ. ಈಗಾಗಲೇ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ ಹತ್ತರಷ್ಟು ಮೀಸಲಾತಿ ನೀಡಿ ಶೇಕಡಾ 50ರ ಮಿತಿಯನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.


ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು ಮತ್ತು ಈ ಮೀಸಲಾತಿಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 50ರಿಂದ ಶೇಕಡಾ 75ರ ವರೆಗೆ ಹೆಚ್ಚಿಸಿ ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುತ್ತೇವೆ. ಮೀಸಲಾತಿ ಪರಿಷ್ಕರಣೆಗೆ ಕರ್ನಾಟಕ ರಾಜ್ಯಕ್ಕೆ ಹೆಚ್ಚು ಅನುಕೂಲ ಇದೆ. ಯಾಕೆಂದರೆ ನಮ್ಮಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮನೆ ಮನೆಗೆ ತೆರಳಿ ವೈಜ್ಞಾನಿಕವಾಗಿ ಗಣತಿ ಮಾಡಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಸಿದ್ಧ ಇದೆ. ಅದರ ಆಧಾರದಲ್ಲಿ ಮೀಸಲಾತಿ ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಕೊಳ್ಳಬಹುದು ಎಂಬ ಭರವಸೆ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

1994ರಲ್ಲಿ ಎಂ.ವೀರಪ್ಪ ಮೊಯಿಲಿ ಸರ್ಕಾರ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇಕಡಾ 73ಕ್ಕೆ ಹೆಚ್ಚಿಸಿ ಆದೇಶ ಮಾಡಿತ್ತು. ಅದಿನ್ನು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಅಲ್ಲಿಯೂ ರಾಜ್ಯ ಸರ್ಕಾರ ಜಾತಿಗಣತಿಯ ವರದಿಯನ್ನು ಮುಂದಿಟ್ಟು ಮೀಸಲಾತಿ ಹೆಚ್ಚಳಕ್ಕೆ ಅನುಮತಿ ಕೋರಿದರೆ ನ್ಯಾಯಾಲಯ ಖಂಡಿತ ಒಪ್ಪಿಗೆ ನೀಡಬಹುದು. ಸಾಮಾಜಿಕ ಅನ್ಯಾಯವನ್ನೇ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡು ಬಂದ ಭಾರತೀಯ ಜನತಾ ಪಕ್ಷಕ್ಕಾಗಲಿ, ಅದರ ಅಧ್ಯಕ್ಷರಿಗಾಗಲಿ ಸಾಮಾಜಿಕ ನ್ಯಾಯ ಅರ್ಥವಾಗಲಾರದು. ನಮ್ಮದು ಕೋಮುವಾದವನ್ನು ಉಸಿರಾಡುವ ಗುಜರಾತ್ ಅಲ್ಲ, ಬಸವವಾದವನ್ನು ಮೈಗೂಡಿಸಿಕೊಂಡಿರುವ ಕರ್ನಾಟಕ ಎನ್ನುವುದನ್ನು ನೆನಪಿಸಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.


ಸಾಧನೆಯ ಬಲದಿಂದಾಗಲಿ, ಸವಕಲುಗೊಂಡಿರುವ ಕೋಮುವಾದದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಈ ಅಡ್ಡಕಸುಬಿ ಮೀಸಲಾತಿ ನೀತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಈ ಮೀಸಲಾತಿಯನ್ನು ಒಕ್ಕಲಿಗ ಇಲ್ಲವೇ ಲಿಂಗಾಯತರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಮುಸ್ಲಿಂ ಮತ್ತು ಒಕ್ಕಲಿಗ-ಲಿಂಗಾಯತರ ನಡುವೆ ದ್ವೇಷ ಹುಟ್ಟಿಸುವುದೇ ಆಗಿದೆ. ಅಮಿತ್ ಶಾ ಅವರ ಪ್ರಶ್ನೆಯಲ್ಲಿಯೇ ಬಿಜೆಪಿಯ ದುಷ್ಟ ಆಲೋಚನೆ ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವ ಮುಸ್ಲಿಮರು ಮೀಸಲಾತಿ ರದ್ದತಿಯಿಂದ ಅಧೀರರಾಗಲಿಲ್ಲ, ಪ್ರಚೋದನೆಗೂ ಒಳಗಾಗಲಿಲ್ಲ. ಅದೇ ರೀತಿ ಇದು ಕನ್ನಡಿಯೊಳಗಿನ ಗಂಟು ಎನ್ನುವುದನ್ನು ಅರ್ಥಮಾಡಿಕೊಂಡಿರುವ ಜಾಗೃತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೂಡಾ ಹೊಸ ಮೀಸಲಾತಿ ಘೋಷಣೆಯಿಂದ ಸಂಭ್ರಮಗೊಳ್ಳಲಿಲ್ಲ. ಇದು ನಮ್ಮ ಕರ್ನಾಟಕ. ಈಗ ನಿರೀಕ್ಷೆಯಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಹೊಸ ಮೀಸಲಾತಿಯನ್ನು ಜಾರಿಗೆ ತರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಗೃಹಸಚಿವರು ಚುನಾವಣಾ ಭಾಷಣದಲ್ಲಿ ಅದರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ಅವರೇ, ಇದು ಕರ್ನಾಟಕ, ಇಲ್ಲಿ ಹೊಡೆಯುವ, ಬಡಿಯುವ, ಮುರಿಯುವ, ಸುಡುವ ‘ಗುಜರಾತ್ ಮಾದರಿ’ ನಡೆಯುವುದಿಲ್ಲ. ಇಲ್ಲಿ ಏನಿದ್ದರೂ ಪ್ರೀತಿಸುವ, ಪೊರೆಯುವ ಮತ್ತು ಕಟ್ಟುವ ‘ಕರ್ನಾಟಕ ಮಾದರಿ’ಯೇ ನಡೆಯುವುದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Join Whatsapp
Exit mobile version