ಹೈದರಾಬಾದ್: ಸಂಧ್ಯಾ ಥಿಯೇಟರ್ ಕಾಲ್ತುಳಿತ ದುರಂತ ಸಂಭವಿಸಿದ 30 ದಿನಗಳ ನಂತರ, ನಟ ಅಲ್ಲು ಅರ್ಜುನ್ ಮಂಗಳವಾರ ಬೆಳಗ್ಗೆ ಸಿಕಂದರಾಬಾದ್ ನ ಕಿಮ್ಸ್‌ನಲ್ಲಿ ಗಾಯಾಳು ಒಂಬತ್ತು ವರ್ಷದ ಶ್ರೀ ತೇಜ್ ಅವರನ್ನು ಭೇಟಿ ಮಾಡಿದರು. ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಆರಂಭದಲ್ಲಿ ಡಿಸೆಂಬರ್ 5 ರಂದು ಶ್ರೀ ತೇಜ್ ಅವರನ್ನು ಭೇಟಿ ಮಾಡಲು ಅಲ್ಲು ಅರ್ಜುನ್ ಯೋಜಿಸಿದ್ದರು. ಆದರೆ ಅವರ ಭೇಟಿಯನ್ನು ಮರುಪರಿಶೀಲಿಸುವಂತೆ ರಾಮಗೋಪಾಲಪೇಟೆ ಪೊಲೀಸರು ನೋಟಿಸ್ ನೀಡಿದ ನಂತರ ಭೇಟಿಯನ್ನು ರದ್ದುಗೊಳಿಸಿದ್ದರು. ಆದರೆ, ನಂತರದ ನೋಟಿಸ್ ನಲ್ಲಿ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಲು ಅಗತ್ಯ ವ್ಯವಸ್ಥೆ ಮಾಡಲು ಸಿದ್ಧ ಎಂದು ಪೊಲೀಸರು ತಿಳಿಸಿದ್ದರು.
ಆಸ್ಪತ್ರೆ ಮತ್ತು ಸುತ್ತಮುತ್ತ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡಲು ಭೇಟಿಯನ್ನು ರಹಸ್ಯವಾಗಿಡುವಂತೆ ಮನವಿ ಮಾಡುತ್ತೇವೆ. ರಾಮಗೋಪಾಲಪೇಟೆ ಪೊಲೀಸರು ಭೇಟಿ ವೇಳೆ ಬೆಂಗಾವಲಾಗಿ ಇರುತ್ತಾರೆ ಎಂದು ನೋಟಿಸ್ ನಲ್ಲಿ ಹೇಳಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.