ಬೆಂಗಳೂರು: ಡಿಕೆ ಶಿವಕುಮಾರ್ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭದ್ರತೆ. ಒಳಬೇಗುದಿ ಆರಂಭದಿಂದಲೂ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವ ಪ್ರಶ್ನೆ ನಿರ್ಮಾಣವಾಗಿದ್ದು, ಕಾಲ ಸನ್ನಿಹಿತವಾಗಿದೆ. ಇದು ನಿರೀಕ್ಷಿತ ಬೆಳವಣಿಗೆ, ಇದರಲ್ಲಿ ಬಹಳ ಮುಖ್ಯ ವಿಚಾರ ಡಿಕೆಶಿ ಅವರ ಸಹನೆ, ಅವರು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಹಳ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ. ಅದು ಅವರ ಮುತ್ಸದ್ದಿತನವೋ? ಹೈಕಮಾಂಡ್ ಸೂಚನೆಯೋ ನೋಡಬೇಕು. ಅವರ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಅನ್ನುವುದು ಮುಖ್ಯವಾಗುತ್ತದೆ. ಪ್ರಕ್ರಿಯೆ ಆರಂಭವಾಗಿದ್ದು, ಕಾಲ ಯಾವಾಗ ಬರುತ್ತದೆ ಎಂದು ನೋಡಬೇಕು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮೇಲಿನ ಕಮಿಷನ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಎಲ್ಲದರಲ್ಲಿ ಕಮಿಷನ್, ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಜನ ಹೈರಾಣಾಗಿದ್ದಾರೆ. ಅಬಕಾರಿ ಗುತ್ತಿಗೆದಾರರು, ಪಿಡಬ್ಲ್ಯೂಡಿ, ನೀರಾವರಿ ಇಲಾಖೆಯ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ಸೈಟ್ ತೆಗೆದುಕೊಳ್ಳಲಾಗದ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ಎಸ್ಸಿ, ಎಸ್ಟಿ ಬೋರ್ವೆಲ್ಗಳಿಗೂ ಕಮಿಷನ್ ಪಡೆಯುತ್ತಿದ್ದಾರೆ. ಭ್ರಷ್ಟಾಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಇದನ್ನು ಸಿಎಂ ನಿರಾಕರಿಸಿರಬಹುದು, ಅವರಿಗೆ ಹಿಡಿತ ಕೈತಪ್ಪಿರಬಹುದು, ಅವರೇ ಭಾಗಿಯಾಗಿರಬಹುದು ಅಥವಾ ಅದರ ಬಗ್ಗೆ ಮಾತನಾಡಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ. ಸರ್ಕಾರದಲ್ಲಿ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ಪರ್ಸೆಂಟ್ ಕಮಿಷನ್ ಇದೆ. ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ. ಆದರೆ, ಕುಮಾರಸ್ವಾಮಿಯವರು ಹೇಳಿರುವುದು ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಿಡಿಕಾಡಿದರು.