Home ಟಾಪ್ ಸುದ್ದಿಗಳು ಅಡ್ಯಾರ್ | ಬಸ್ ನಲ್ಲಿ ಕಂಡಕ್ಟರ್-ಪ್ರಯಾಣಿಕನ ಜಗಳ : ಖಾಸಗಿ ಸಿಟಿ ಬಸ್ ಬಂದ್

ಅಡ್ಯಾರ್ | ಬಸ್ ನಲ್ಲಿ ಕಂಡಕ್ಟರ್-ಪ್ರಯಾಣಿಕನ ಜಗಳ : ಖಾಸಗಿ ಸಿಟಿ ಬಸ್ ಬಂದ್

ಮಂಗಳೂರು : ನಗರದ ಹೊರವಲಯದಲ್ಲಿರುವ ಅಡ್ಯಾರ್ ಕಣ್ಣೂರು ಬಳಿ ಖಾಸಗಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರೊಬ್ಬರ ನಡುವೆ ನಡೆದ ಜಗಳದಿಂದಾಗಿ ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಖಾಸಗಿ ಬಸ್ ಸಂಚಾರ ಬಂದ್ ಆಗಿರುವುದರಿಂದ ಅಡ್ಯಾರ್ ಕಣ್ಣೂರಿನ ಪ್ರಯಾಣಿಕರು ಬಸ್ ಸಿಗದೇ ಪರದಾಡುವಂತಾಗಿದೆ.


ಘಟನೆ ಸಂಬಂಧ ಕಂಕನಾಡಿ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದೆ. ನಿನ್ನೆ ಸಂಜೆ ಎಸ್.ಕೆ ಟ್ರಾವೆಲ್ಸ್ ಬಸ್ ಕಂಡಕ್ಟರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಡ್ಯಾರ್ ಕಣ್ಣೂರು ನಿವಾಸಿ ಅಬ್ದುಲ್ ಖಾದರ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಣ್ಣೂರು ಸ್ಟಾಪ್ ನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ನಿಲ್ಲಿಸದೇ ಮುಂದಕ್ಕೆ ಹೋಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಾಗ ಬಸ್ ಕಂಡಕ್ಟರ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಅಬ್ದುಲ್ ಖಾದರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇನ್ನೊಂದೆಡೆ ಖಾಸಗಿ ಬಸ್ ಕಂಡಕ್ಟರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದು, ನನ್ನ ಮೇಲೆ ಅಬ್ದುಲ್ ಖಾದರ್ ಮತ್ತು ಸಂಗಡಿಗರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.


ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಖಾಸಗಿ ಬಸ್ ಸಿಬ್ಬಂದಿ ಮತ್ತು ಮಾಲಕರು ಅಡ್ಯಾರ್ ನಲ್ಲಿ ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬಸ್ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅವಾಂತರಗಳಿಗೆ ಕಾರಣವಾಗಿರುವ ಬಸ್ ಟೈಮಿಂಗ್ ಪದ್ಧತೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ಬಸ್ ಗಳ ಪ್ರತಿಭಟನೆಯಿಂದ ಆಕ್ರೋಶಗೊಂಡಿರುವ ಕಣ್ಣೂರು ನಿವಾಸಿಗಳು, ಖಾಸಗಿ ಬಸ್ ನಿರ್ವಾಹಕರ ಗೂಂಡಾಗಿರಿ ಮತ್ತು ದಬ್ಬಾಳಿಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಬಸ್ ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಬಸ್ಸಿನ ನಿರ್ವಾಹಕ ಮಗಳ ಮುಂದೆಯೇ ಒಬ್ಬ ತಂದೆಗೆ ಹೊಡೆದು ಗಾಯಗೊಳಿಸಿರುತ್ತಾನೆ. ಆರೋಪಿಯ ವಿರುದ್ದ ಆ ತಂದೆ ಕೇಸು ದಾಖಲಿಸಿದ್ದಕ್ಕೆ ಯಾವುದೇ ಮುನ್ಸೂಚನೆ ನೀಡದೆ ಮಂಗಳೂರಿನಿಂದ ಅಡ್ಯಾರಿಗೆ ಬರುವ ಎಲ್ಲಾ ಬಸ್ಸುಗಳು ಬಂದ್ ಮಾಡಿ ದರ್ಪ ಮೆರೆದಿದ್ದಾರೆ. ಇಂದು ಶಾಲಾ ಮಕ್ಕಳಿಗೆ ಪರೀಕ್ಷೆ ಇರುವುದನ್ನು ಮನಗಂಡು ಬೇಕಂತಲೇ ಈ ರೀತಿ ಬಂದ್ ಮಾಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಬಸ್ ನವರ ದಬ್ಬಾಳಿಕೆ ಮತ್ತು ಗೂಂಡಾಗಿರಿಯನ್ನು ತಡೆಗಟ್ಟಬೇಕು ಮತ್ತು ಮಂಗಳೂರಿನಿಂದ ಅಡ್ಯಾರ್ ವರೆಗೆ ಖಾಸಗಿ ಬಸ್ ಬದಲಾಗಿ ಸರ್ಕಾರಿ ಬಸ್ ಸೇವೆ ಒದಗಿಸಿಕೊಡಬೇಕು ಎಂದು ಕಣ್ಣೂರಿನ ನಾಗರಿಕರು ಮನವಿ ಮಾಡಿದ್ದಾರೆ.

ಎಸ್‌ಡಿಪಿಐ ಪಕ್ಷದ ಕಣ್ಣೂರು ವಾರ್ಡ್ ಸಮಿತಿ ಕೂಡ ಖಾಸಗಿ ಬಸ್ ನವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಮುನ್ಸೂಚನೆ ನೀಡದೆ ಬಸ್ ಬಂದ್ ಮಾಡಿದ್ದರಿಂದ ನಿತ್ಯ ಪ್ರಯಾಣಿಸುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಪ್ರಯಾಣಿಸಲು ಪರದಾಡುವಂತಾಯಿತು. ಪರೀಕ್ಷೆ ನಡೆಯುತ್ತಿರುವುದರಿಂದ ಕೆಲವು ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಹೋಗಿದ್ದಾರೆ. ಆದ್ದರಿಂದ ಏಕಾಏಕಿ ಬಸ್ ಬಂದ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಕಂಡೆಕ್ಟರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅಡ್ಯಾರ್ ಕಣ್ಣೂರಿಗೆ ಕೂಡಲೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು SDPI ಆಗ್ರಹಿಸಿದೆ.

Join Whatsapp
Exit mobile version