Home ಟಾಪ್ ಸುದ್ದಿಗಳು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ

ಬೆಂಗಳೂರು : ಮಲಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಸವದತ್ತಿ ತಾಲ್ಲೂಕಿನ ಏಣಗಿ-ಹಳೆ ಏಣಗಿ ಮಲ್ಲೂರು-ಜಾಕವೆಲ್ ರಸ್ತೆ, ಬಡ್ಲಿ-ಹಳೇ ಬಡ್ಲಿ, ಸುತಗಟ್ಟಿ-ಹಿಟ್ಟಣಗಿ-ಏಣಗಿ ರಸ್ತೆಗಳ ದುರಸ್ತಿಗಾಗಿ ಕರ್ನಾಟಕ ನೀರಾವರಿ ನಿಗಮದಿಂದ ಅಂದಾಜು ಪತ್ರಿಕೆಯನ್ನು ತಯಾರಿಸಲಾಗುತ್ತಿದ್ದು, ಆದಷ್ಟೂ ಬೇಗ ಮಂಜೂರಾತಿ ಕೊಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ವಿಧಾನಸಭೆಗೆ ಇಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿಯವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಏಣಗಿ-ಹಳೆ ಏಣಗಿ ಗ್ರಾಮದವರೆಗಿನ 6 ಕಿ.ಮೀ ಉದ್ದದ ರಸ್ತೆಗೆ ಈಗಾಗಲೇ 309 ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಆದಷ್ಟೂ ಬೇಗ ಆಡಳಿತಾತ್ಮಕ ಮಂಜೂರಾತಿ ನೀಡಲಾಗುವುದೆಂದು ಮಾನ್ಯ ಸಚಿವರು ತಿಳಿಸಿದರು. ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಬೈಲ ಹೊಂಗಲ ತಾಲ್ಲೂಕಿನ 15 ಗ್ರಾಮಗಳು ಹಾಗೂ ಸವದತ್ತಿ ತಾಲ್ಲೂಕಿನ 12 ಗ್ರಾಮಗಳು ಮಲಪ್ರಭಾ ಯೋಜನೆಯ ಮುಳುಗಡೆ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಈ ಪುನರ್ ವಸತಿ ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರದೇಶವು ಕಪ್ಪು ಮಣ್ಣಿನಿಂದ ಕೂಡಿದ್ದು, ಈ ಕಪ್ಪು ಮಿಶ್ರಿತ ಮಣ್ಣಿನಿಂದ ಕೂಡಿದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸಚಿವರು ವಿವರಿಸಿದರು. ಈ ಎಲ್ಲಾ ರಸ್ತೆಗಳ ದುರಸ್ತಿಗೆ ಮಂಜೂರಾತಿ ನೀಡಲಾಗುವುದೆಂದು ತಿಳಿಸಿದರು.

ಸಕಲೇಶಪುರ ಕ್ಷೇತ್ರಕ್ಕೆ ಅನುದಾನದ ಕೊರತೆಯಾಗಿಲ್ಲ

 ಜಲ ಸಂಪನ್ಮೂಲ ಇಲಾಖೆಯಿಂದ ಎಸ್.ಸಿ.ಪಿ./ಟಿ.ಎಸ್.ಪಿ ಯೋಜನೆಯಡಿಯಲ್ಲಿ ಸಕಲೇಶಪುರ ಕ್ಷೇತ್ರಕ್ಕೆ 13 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಅಲ್ಲಿಯ ಕಾಮಗಾರಿಗಳಿಗೆ ಯಾವುದೇ ಯೋಜನೆಯಡಿ ತಾರತಮ್ಯವೆಸಗಿಲ್ಲವೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು.

2015-16 ರಿಂದ ಸಕಲೇಶಪುರ ಕ್ಷೇತ್ರದ ರಸ್ತೆಗಳಿಗೆ 223 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಸಚಿವರು ಪ್ರಶ್ನೋತ್ತರ ವೇಳೆಯಲ್ಲಿ ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿಯವರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ನೀರಾವರಿ ಇಲಾಖೆಯ ರಸ್ತೆ ಕಾಮಗಾರಿಗಳನ್ನು ಅವಶ್ಯಕತೆ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಹೊರತು ಬೇರೆ ಯಾವುದೇ ಮಾನದಂಡವನ್ನು ಅನುಸರಿಸುವುದಿಲ್ಲ ಎಂದು ಹೇಳಿದರು.

   ವರುಣ ಕ್ಷೇತ್ರದ ಹಾರೋಹಳ್ಳಿ ಕೆಳದಂಡೆ ನಾಲೆ ಆಧುನೀಕರಣ

ಜಲ ಸಂಪನ್ಮೂಲ ಇಲಾಖೆಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ತಾಲ್ಲೂಕಿನ ಹಾರೋಹಳ್ಳಿ ಕೆಳದಂಡೆ ನಾಲೆಯನ್ನು ಆಧುನೀಕರಣಗೊಳಿಸುವ 21.80 ಮೊತ್ತದ ಪ್ರಸ್ತಾವನೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಕೈಗೆತ್ತಿಗೊಳ್ಳಲು ಪರಿಶೀಲಿಸಲಾಗುವುದೆಂದು ಜಲ ಸಂಪನ್ಮೂಲ ಸಚಿವರ ಗೋವಿಂದ ಕಾರಜೋಳ ವಿಧಾನಸಭೆಗೆ ತಿಳಿಸಿದರು. ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯರವರ ಪ್ರಶ್ನೆಗೆ ಸಚಿವ ಕಾರಜೋಳ ಉತ್ತರಿಸಿದರು.

Join Whatsapp
Exit mobile version