ಬೆಂಗಳೂರು: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವೇದವ ಅವರನ್ನು ಆರೋಪಮುಕ್ತಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮಂಗಳೂರಿನ ವಿಚಾರಣಾಧೀನ ನ್ಯಾಯಾಲಯದ ಆದೇಶ ಬದಿಗೆ ಸರಿಸುವಂತೆ ಕೋರಿ ಡಾ. ವೇದವ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವೇದವ ಅವರ ಅರ್ಜಿ ವಜಾ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2017ರ ಜೂನ್ 9ರ ಆದೇಶವನ್ನು ಬದಿಗೆ ಸರಿಸಲಾಗಿದೆ. ಅಂತೆಯೇ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿ ದಾಖಲಾಗಿರುವ ಪ್ರಕರಣದಿಂದ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ವೇದವ ಅವರು ವಿದ್ಯಾರ್ಥಿನಿಯ ಜೊತೆ 2013ರ ಜೂನ್ 2ರಂದು ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದು, 2014ರ ಅಕ್ಟೋಬರ್ 16ರಂದು ಎಫ್’ಐಆರ್ ದಾಖಲಿಸಲಾಗಿದೆ. ಇದರರ್ಥ ದೂರುದಾರೆ ಮತ್ತು ಅರ್ಜಿದಾರರು ಸಂಬಂಧದಲ್ಲಿದ್ದರು ಎಂಬುದಾಗಿದೆ. ಇಬ್ಬರ ನಡುವಿನ ಸಂಬಂಧ ಹದಗೆಟ್ಟಾಗ ದೂರುದಾರೆಯು ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ವೇದವ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.
ದೂರುದಾರೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಕೊತೆ ಲೈಂಗಿಕ ಸಂಪರ್ಕ ಬೆಳೆಸಿರುವುದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ವಿವರಣೆ ಇಲ್ಲ. ಆದರೆ, ಅರ್ಜಿದಾರರು ಬಲವಂತವಾಗಿ ಆಕೆಯ ಜೊತೆ ಸಂಭೋಗಿಸಿದ್ದರು ಎಂಬುದು ಆರೋಪವಾಗಿದೆ. ಇದಕ್ಕೆ ಐಪಿಸಿ ಸೆಕ್ಷನ್ 376, 506 ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ವೇದವ ಅವರು ಆಗಿಂದಾಗ್ಗೆ ದೂರುದಾರೆಯ ಮನೆಗೆ ಭೇಟಿ ನೀಡುತ್ತಿದ್ದರು. 2013ರ ಆಗಸ್ಟ್ 2ರಂದು ದೂರುದಾರೆಯು ಮನೆಯಲ್ಲಿ ಒಬ್ಬರೇ ಇದ್ದಾಗ ಆಕೆಯ ಜೊತೆ ಬಲವಂತದಿಂದ ಸಂಭೋಗ ನಡೆಸಿದ್ದರು. ಈ ಘಟನೆಯನ್ನು ಯಾರಿಗೂ ಹೇಳದಂತೆ, ಒಂದೊಮ್ಮೆ ಹೇಳಿದರೆ ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಮತ್ತೆ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ಬಲವಂತದಿಂದ ಸಂಭೋಗ ನಡೆಸಿದ್ದರು ಎನ್ನುವುದು ವೇದವ ಅವರ ಮೇಲಿದ್ದ ಆರೋಪ. ಈ ಅಪರಾಧಕ್ಕಾಗಿ ಸಂಜ್ಞೇಯ ಪರಿಗಣಿಸಲಾಗಿತ್ತು. ಇದನ್ನು ಪ್ರಶ್ನಿಸಿ ವೇದವ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಮಾನ್ಯ ಮಾಡಿದೆ.
(ಕೃಪೆ: ಬಾರ್ & ಬೆಂಚ್)