Home ಟಾಪ್ ಸುದ್ದಿಗಳು ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ಮಹಿಳೆಯ ಬಂಧನ

ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ಮಹಿಳೆಯ ಬಂಧನ

ಬೆಂಗಳೂರು: ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಸೀಲ್ದಾ ಜಿಲ್ಲೆಯ ಪ್ರಿಯಾಂಕಾ ಚಕ್ರವರ್ತಿ(24) ಬಂಧಿತ ಆರೋಪಿ.
ಕಳೆದ ಮಾ.5ರ ಮಧ್ಯರಾತ್ರಿ ಇಂಡಿಗೋ ವಿಮಾನ ಸಂಖ್ಯೆ 6ಇ 716 ರ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ವಿಮಾನವು ಕೋಲ್ಕತ್ತಾದಿಂದ ರಾತ್ರಿ 9.50 ಕ್ಕೆ ಹೊರಟು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದೆ. ವಿಮಾನ ಲ್ಯಾಂಡ್ ಆಗುವ 30 ನಿಮಿಷ ಮೊದಲು ಪ್ರಿಯಾಂಕಾ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಪ್ರಿಯಾಂಕಾ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದಾರೆ ಎಂದು ಶಂಕಿಸಿದ ವಿಮಾನ ಸಿಬ್ಬಂದಿ ಆಕೆಯನ್ನು ಬಾಗಿಲು ತೆರೆಯುವಂತೆ ಕೇಳಿದ್ದಾರೆ. ಶೌಚಾಲಯದ ಡಸ್ಟ್ಬಿನ್’ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿದೆ.
ಬಳಿಕ ಸಿಬ್ಬಂದಿ ಡಸ್ಟ್’ಬಿನ್’ಗೆ ನೀರು ಸುರಿದು ಅದರ ಬೆಂಕಿ ನಂದಿಸಿದ್ದಾರೆ. ವಿಮಾನದ ಕ್ಯಾಪ್ಟನ್ ಪ್ರಿಯಾಂಕಾ ಅವರನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿದರು. ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಪ್ರಿಯಾಂಕಾ ಅವರನ್ನು ವಿಮಾನ ನಿಲ್ದಾಣದ ಭದ್ರತಾ ವಿಭಾಗಕ್ಕೆ ಒಪ್ಪಿಸಿದ್ದಾರೆ.
ಇಂಟರ್’ಗ್ಲೋಬ್ ಏವಿಯೇಷನ್’ನ ಭದ್ರತಾ ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ್ ಕೆ ನಂತರ ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯವನ್ನು ಎಸಗಿದ್ದಕ್ಕಾಗಿ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ.

Join Whatsapp
Exit mobile version