Home ಕರಾವಳಿ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಅಪಘಾತ: 20 ಅಡಿ ಆಳದ ಸರ್ವೀಸ್ ರಸ್ತೆಗೆ ಬುಲೆಟ್ ಎಸೆಯಲ್ಪಟ್ಟು...

ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಅಪಘಾತ: 20 ಅಡಿ ಆಳದ ಸರ್ವೀಸ್ ರಸ್ತೆಗೆ ಬುಲೆಟ್ ಎಸೆಯಲ್ಪಟ್ಟು ಯುವ ಮರಾಠ ಮುಖಂಡ ಸಾವು

ಮಂಗಳೂರು: ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಉಂಟಾದ ಅಪಘಾತದ ರಭಸಕ್ಕೆ ಬುಲೆಟ್ ಬೈಕೊಂದು ಮೇಲ್ಸೇತುವೆಯಿಂದ 20 ಅಡಿ ಆಳದ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.


ಕುಂಪಲ ಸರಳಾಯ ಕಾಲನಿ ನಿವಾಸಿ ಸುಬ್ರಹ್ಮಣ್ಯ ರಾವ್ ಸಿಂಧ್ಯ (45) ಮೃತಪಟ್ಟವರು. ಇಂದು ಸಂಜೆ ಸುಬ್ರಹ್ಮಣ್ಯ ಅವರು ಮಂಗಳೂರಿನಿಂದ ಕುಂಪಲ ಕಡೆಗೆ ತೊಕ್ಕೊಟ್ಟು ಮೇಲ್ಸೇತುವೆ ಮೂಲಕ ಬುಲೆಟಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಹಿಂಬದಿಯಿಂದ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಬುಲೆಟ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲ್ಸೇತುವೆಯಿಂದ ಸವಾರ ಕೆಳಗೆ ಎಸೆಯಲ್ಪಟ್ಟಿದ್ದಾರೆ. ತೀವ್ರ ಗಾಯಗೊಂಡ ಸುಬ್ರಹ್ಮಣ್ಯ ಅವರನ್ನು ತಕ್ಷಣ ಸ್ಥಳೀಯರು ತೊಕ್ಕೊಟ್ಟಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಬ್ರಹ್ಮಣ್ಯ ಅವರು ಈ ಹಿಂದೆ ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮಂಗಳೂರಿಗೆ ಆಗಮಿಸಿ, ಸಿವಿಲ್ ಕನ್ಸ್ ಸ್ಟ್ರಕ್ಷನ್ ಕೆಲಸ ಮಾಡುತ್ತಿದ್ದರು. ಅವರು ಯುವ ಮರಾಠ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಸುಬ್ರಹ್ಮಣ್ಯ ಅವರು ತಾಯಿ, ಪತ್ನಿ, ಮಗಳನ್ನು ಅಗಲಿದ್ದಾರೆ.


ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ಅವರ ಕುಟುಂಬದವರು ಆಸ್ಪತ್ರೆಗೆ ಧಾವಿಸಿ ಬಂದಿದ್ದು, ಪತ್ನಿ ಮತ್ತು ಮಗುವಿನ ರೋದನ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.


ಈ ಹಿಂದೆಯೂ ಇದೇ ರೀತಿಯ ದುರಂತ ಮೇಲ್ಸೇತುವೆಯಲ್ಲಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.

Join Whatsapp
Exit mobile version