ನವದೆಹಲಿ: ದೆಹಲಿ ವಕ್ಫ್ ಬೋರ್ಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಇಲ್ಲಿನ ನ್ಯಾಯಾಲಯ ಗುರುವಾರ ಆದೇಶಿಸಿದ್ದು, ಅವರ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನ ವಿಚಾರಣೆಗೆ ನಿರಾಕರಿಸಿದೆ.
ಖಾನ್ ವಿರುದ್ಧ ಮುಂದುವರೆಯಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಅನುಮತಿ ನೀಡಲಾಗದು ಎಂದು ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಹೇಳಿದರು.
ಒಂದು ಲಕ್ಷ ರೂ. ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಆಧಾರದ ಮೇಲೆ ಖಾನ್ ಅವರನ್ನು ತಕ್ಷಣವೇ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.
ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಬೋರ್ಡ್ ನಲ್ಲಿ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಕ್ಟೋಬರ್ 29 ರಂದು 110 ಪುಟಗಳ ಮೊದಲ ಪೂರಕ ಪ್ರಾಸಿಕ್ಯೂಷನ್ ದೂರನ್ನು (ಇಡಿ ಚಾರ್ಜ್ ಶೀಟ್ ಗೆ ಸಮನಾಗಿರುತ್ತದೆ) ಸಲ್ಲಿಸಿತ್ತು.