Home ಮಾಹಿತಿ ಇಸ್ರೋ ವೆಚ್ಚ ಅಪ್ರಯೋಜಕವಾಗಿಲ್ಲ: ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ಕೊಟ್ಟಿದೆ; ಎಸ್ ಸೋಮನಾಥ್

ಇಸ್ರೋ ವೆಚ್ಚ ಅಪ್ರಯೋಜಕವಾಗಿಲ್ಲ: ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ಕೊಟ್ಟಿದೆ; ಎಸ್ ಸೋಮನಾಥ್

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಪ್ರತಿ ರೂಪಾಯಿ ಹೂಡಿಕೆಗೆ ಪ್ರತಿಯಾಗಿ ಸಮಾಜಕ್ಕೆ ಕನಿಷ್ಠ 2.5 ರೂಪಾಯಿ ಪ್ರತಿಫಲ ದೊರಕಿರುವುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಪ್ರಕಟಿಸಿದ್ದಾರೆ.

ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಶನಲ್ ಇನ್ಸ್ ಟಿಟ್ಯೂಶನ್ಸ್ ಸೊಸೈಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಸ್ರೋ ಯೋಜನೆಗಳಿಂದ ಸಮಾಜಕ್ಕೆ ಮತ್ತು ಆರ್ಥಿಕತೆಗೆ ಹೇಗೆ ಲಾಭ ಆಗುತ್ತಿದೆ ಎನ್ನುವ ಸಂಗತಿಯನ್ನು ವಿವರಿಸಿದ್ದಾರೆ.


‘ಚಂದ್ರನಲ್ಲಿ ಹೋಗುವುದು ದುಬಾರಿ ಕಾರ್ಯ ಹೌದು. ಫಂಡಿಂಗ್ ಗಾಗಿ ಸರ್ಕಾರದ ಮೇಲೆಯೇ ನಾವು ಅವಲಂಬಿತರಾಗುವಂತಿಲ್ಲ. ಬಿಸಿನೆಸ್ ಅವಕಾಶಗಳನ್ನು ಸೃಷ್ಟಿಸಬೇಕಾಗುತ್ತದೆ. ನಮ್ಮ ಪ್ರಯೋಗಗಳನ್ನು ಮುಂದುವರಿಸಬೇಕಾದರೆ ಅದಕ್ಕೆ ಬಳಕೆಯನ್ನೂ ನಾವು ಸೃಷ್ಟಿಸಬೇಕು. ಇಲ್ಲದಿದ್ದರೆ, ಸರ್ಕಾರ ನಮ್ಮ ಕೆಲಸವನ್ನು ನಿಲ್ಲಿಸಲು ಹೇಳಬಹುದು’ ಎಂದು ಇಸ್ರೋ ಛೇರ್ಮನ್ ಎಸ್ ಸೋಮನಾಥ್ ವಾಸ್ತವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.


ಯೂರೋಪ್ ನ ಸ್ಪೇಸ್ ಕನ್ಸಲ್ಟೆನ್ಸಿ ಸಂಸ್ಥೆಯಾದ ನೋವಾಸ್ಪೇಸ್ ನ ಸಹಯೋಗದಲ್ಲಿ ಇಸ್ರೋ ಸಂಸ್ಥೆಯು ಭಾರತದ ಬಾಹ್ಯಾಕಾಶ ಯೋಜನೆಗಳಿಂದ ಯಾವೆಲ್ಲಾ ಅನುಕೂಲಗಳಾಗಿವೆ ಎನ್ನುವುದನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು. ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದರ್ ಸಿಂಗ್ ಅವರು ಈ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಆ ವರದಿಯಲ್ಲಿನ ಅಂಶಗಳನ್ನು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಉಲ್ಲೇಖಿಸುತ್ತಾ, ಬಾಹ್ಯಾಕಾಶ ಯೋಜನೆಯಿಂದ ಆದ ಅನುಕೂಲಗಳೇನು ಎಂಬುದನ್ನು ವಿವರಿಸಿದ್ಧಾರೆ.


ನೊವಾಸ್ಪೇಸ್ ತಯಾರಿಸಿದ ಆ ವರದಿ ಪ್ರಕಾರ 2014ರಿಂದ 2024ರವರೆಗೆ ಭಾರತದ ಜಿಡಿಪಿಗೆ ಬಾಹ್ಯಾಕಾಶ ಕ್ಷೇತ್ರದ ಕೊಡುಗೆ 60 ಬಿಲಿಯನ್ ಡಾಲರ್ ನಷ್ಟಿದೆ. ಈ ಲೆಕ್ಕದ ಪ್ರಕಾರ ಈ ಸೆಕ್ಟರ್ ನಲ್ಲಿ ಹೂಡಿಕೆಯಾದ ಪ್ರತೀ ಡಾಲರ್ ಹಣವೂ ಭಾರತೀಯ ಆರ್ಥಿಕತೆಗೆ 2.54 ಡಾಲರ್ನಷ್ಟು ಲಾಭ ತಂದಿದೆಯಂತೆ.


2023ರಲ್ಲಿ ಭಾರತಿಯ ಬಾಹ್ಯಾಕಾಶ ವಲಯದ ಆದಾಯ 6.3 ಬಿಲಿಯನ್ ಡಾಲರ್ ಗೆ ಏರಿದೆ. ಅತಿದೊಡ್ಡ ಬಾಹ್ಯಾಕಾಶ ಉದ್ಯಮ ಹೊಂದಿರುವ ದೇಶಗಳಲ್ಲಿ ಭಾರತ ಎಂಟನೇ ಸ್ಥಾನಕ್ಕೇರುವಂತೆ ಮಾಡಿದೆ. ಈ ಉದ್ಯಮವು ಭಾರತದಲ್ಲಿ 47 ಲಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ.

Join Whatsapp
Exit mobile version