ಲುಧಿಯಾನ : ಕೇಂದ್ರದ ಕೃಷಿ ವಿಧೇಯಕದ ವಿರುದ್ಧ ಪಂಜಾಬ್ ನಲ್ಲಿ ರೈತರ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ವಿವಿಧ ಹಂತದ ಪ್ರತಿಭಟನೆಗಳ ಬಳಿಕ ಸೆ.25ರಂದು ಪಂಜಾಬ್ ಬಂದ್ ಗೆ ಸುಮಾರು 10 ಪ್ರಮುಖ ರೈತ ಸಂಘಟನೆಗಳು ಕರೆ ನೀಡಿವೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಂಯೋಜಕ ಸಮಿತಿ (ಎಐಕೆಎಸ್ ಸಿಸಿ) ನೇತೃತ್ವದಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಲುಧಿಯಾನದ ಇಸ್ಸೂರುನಲ್ಲಿ ಈ ಸಂಬಂಧ ಸಭೆಯೊಂದು ನಡೆದಿದೆ.
ವಿವಿಧ ಸಂಘಟನೆಗಳು ವಿಧೇಯಕವನ್ನು ವಿರೋಧಿಸಿ ತಮ್ಮದೇ ಹಂತಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ, ಎಲ್ಲರೂ ಒಂದೇ ಉದ್ದೇಶಕ್ಕಾಗಿ ಪ್ರತಿಭಟಿಸುತ್ತಿರುವುದರಿಂದ, ಇವೆಲ್ಲಾ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಸೆ.19ರಂದು ನಡೆಯಲಿರುವ ಸಭೆಯಲ್ಲಿ ಎಲ್ಲ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲಿವೆ ಎಂದು ಬಿಕೆಯು ಅಧ್ಯಕ್ಷ ಬೂಟಾ ಸಿಂಗ್ ಬುರ್ಜ್ ಗಿಲ್ ಹೇಳಿದ್ದದಾರೆ.
ರೈತ ವಿರೋಧಿ ವಿದೇಯಕದ ವಿರುದ್ಧ ನಮ್ಮ ಆಕ್ರೋಶವನ್ನು ಪ್ರದರ್ಶಿಸಲು ಸೆ.25ರಂದು ಪಂಜಾಬ್ ಬಂದ್ ಗೆ ಕರೆ ನೀಡಲಾಗಿದೆ. ನಾವು ನಮ್ಮ ಜೀವನದಲ್ಲಿ ನೋಡಿದ ತುರ್ತು ಪರಿಸ್ಥಿತಿಗಿಂತಲೂ ಅತ್ಯಂತ ಭೀಕರವಾದ ಸಮಯದಂತೆ ಈಗ ಭಾಸವಾಗುತ್ತಿದೆ ಎಂದು ಎಐಕೆಎಸ್ ಸಿಸಿ ಅಧ್ಯಕ್ಷ ಜಗಮೋಹನ್ ಸಿಂಗ್ ಪಟಿಯಾಲ ಹೇಳಿದ್ದಾರೆ.