ಬಂಟ್ವಾಳ: ಪೊಲೀಸರು ಪ್ರತಿಭಟನಾ ಸಭೆಗೆ ಅನುಮತಿ ನಿರಾಕರಿಸಿದರೂ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಭೆ ಇದೆ ಎಂದು ಸಂದೇಶಗಳನ್ನು ಹರಡಿರುವ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಡಿ.ಪಿ.ಐ.ನ ಅಶ್ರಫ್ ತಲಪಾಡಿ ಮತ್ತು ಇಬ್ಬರು ಆಗಮಿಸಿ, ಅಬ್ದುಲ್ ರಹಿಮಾನ್ ಹತ್ಯೆ, ಅಶ್ರಫ್ ವಯನಾಡ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಕಂಬ ಜಂಕ್ಷನ್ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಗೆ ಧ್ವನಿವರ್ಧಕ ಬಳಸಲು ಅನುಮತಿ ಮತ್ತು ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮನವಿ ಪತ್ರ ನೀಡಿದ್ದರು.
ಮನವಿಯನ್ನು ಸ್ವೀಕರಿಸಿಕೊಂಡ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು, ಮನವಿದಾರರಿಗೆ ಪ್ರಕರಣಗಳಲ್ಲಿ ಸರಕಾರ ಪರಿಹಾರ ಮೊತ್ತವನ್ನು ನೀಡದಿರುವ ಬಗ್ಗೆ ಮೃತರ ಕುಟುಂಬಸ್ಥರು ಅಥವಾ ಯಾರಾದರೂ ಮನವಿ ನೀಡಿರುತ್ತಾರೆಯೇ ಎಂದು ಹೇಳಿದಾಗ ಯಾರು ನೀಡಿರುವುದಿಲ್ಲವೆಂಬುದಾಗಿ ಮತ್ತು ಷಡ್ಯಂತ್ರ ರೂಪಿಸಿದ ಆರೋಪಿತರ ಬಗ್ಗೆ ಮಾಹಿತಿ ಅಥವಾ ಸಾಕ್ಷಿಗಳು ಇದೆಯೇ ಎಂದು ಪ್ರಶ್ನಿಸಿದಾಗ ನಿರ್ದಿಷ್ಟ ಖಚಿತ ಮಾಹಿತಿ ಇರುವುದಿಲ್ಲ ಎಂಬುದಾಗಿ ಮನವಿದಾರರು ಹೇಳಿದ್ದರು.
ಈ ಘಟನೆಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುವುದರಿಂದ ಆರೋಪಿತರು ಮತ್ತು ಸಾಕ್ಷ್ಯಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟ ತನಿಖಾಧಿಕಾರಿಗೆ ಹಾಗೂ ಇತರೆ ಬೇಡಿಕೆಗಳಿದ್ದಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಾನೂನಾತ್ಮಕವಾಗಿ ಸೂಕ್ತ ರೀತಿಯಲ್ಲಿ ಸಂಪರ್ಕಿಸುವಂತೆ ಸೂಚಿಸಿ, ದ.ಕ. ಜಿಲ್ಲೆಯಲ್ಲಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಕಳೆದ ಸುಮಾರು ವರ್ಷಗಳಿಂದ ನಡೆದಿರುವ ಕೋಮು ಸಂಬಂಧಿತ ಹತ್ಯೆ ಮತ್ತು ಸಂಘರ್ಷಗಳನ್ನು ಅವಲೋಕಿಸಿಕೊಂಡು ಬಂಟ್ವಾಳದಲ್ಲಿ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೂಕ್ತ ಕಾನೂನು ತಿಳಿವಳಿಕೆ ನೀಡಿ ಅನುಮತಿ ನಿರಾಕರಿಸಿ ಹಿಂಬರಹವನ್ನು ನೀಡಲಾಗಿದೆ.
ಪೊಲೀಸರು ಪ್ರತಿಭಟನಾ ಸಭೆಗೆ ಅನುಮತಿ ನಿರಾಕರಿಸಿದರೂ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸಭೆ ಇದೆ ಎಂದು ಸಂದೇಶಗಳನ್ನು ಹರಡಿರುವ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನವಿದಾರರಿಗೆ ಸೂಕ್ತ ಕಾನೂನು ತಿಳಿವಳಿಕೆ ನೀಡಿ ಹಿಂಬರಹವನ್ನು ನೀಡಲಾಗಿದ್ದರೂ ಪೋಸ್ಟರ್ ಅನ್ನು ಸಾರ್ವಜನಿಕರಿಗೆ ವಾಟ್ಸ್ಆ್ಯಪ್ ಮೂಲಕ ಪ್ರಸಾರ ಮಾಡಿ, ಕೈಕಂಬ ಜಂಕ್ಷನ್ನಲ್ಲಿ ಸಭೆಯ ಕುರಿತು ಮಾಹಿತಿ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.