Home ಕರಾವಳಿ 2ನೇ ವರ್ಷದ ಗುರುಪುರ ಕಂಬಳ : ಆಮಂತ್ರಣ ಪತ್ರಿಕೆ ಬಿಡುಗಡೆ

2ನೇ ವರ್ಷದ ಗುರುಪುರ ಕಂಬಳ : ಆಮಂತ್ರಣ ಪತ್ರಿಕೆ ಬಿಡುಗಡೆ

0

ಈ ಬಾರಿ ಕೇವಲ ಕಂಬಳವಲ್ಲ, ಕಂಬಳೋತ್ಸವ ನಡೆಯಲಿದೆ : ಇನಾಯತ್ ಅಲಿ

ಮಂಗಳೂರು : ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಏಪ್ರಿಲ್ 12ರಂದು ಆಯೋಜಿಸಿರುವ ದ್ವಿತೀಯ ವರ್ಷದ ಹೊನಲು ಬೆಳಕಿನ “ಗುರುಪುರ ಕಂಬಳ” ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನೆರವೇರಿತು. ಕಂಬಳ‌ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಂಬಳ‌ ಸಮಿತಿ ಕಾರ್ಯಾಧ್ಯಕ್ಷರಾದ ಗುಣಪಾಲ ಕಡಂಬ, ಗುರುಪುರ ಕಂಬಳ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಈ ವೇಳೆ ಮಾತನಾಡಿದ ಇನಾಯತ್ ಅಲಿ, ಈ ಬಾರಿ ಗುರುಪುರದಲ್ಲಿ ಕೇವಲ ಕಂಬಳ ನಡೆಯುವುದಿಲ್ಲ, ಕಂಬಳೋತ್ಸವ ನಡೆಯಲಿದೆ ಎಂದರು. ಈ ಸೀಸನ್‌ನ ಕೊನೆಯ ಕಂಬಳವಾದ‌ ಗುರುಪುರ ಕಂಬಳ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು ಕಂಬಳ ಜೊತೆ ಕಲಾ‌ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಕೋಣದ ಅಂಚೆಚೀಟಿ ಬಿಡುಗಡೆ‌ ಸೇರಿದಂತೆ ವಿಶೇಷ ಕಾರ್ಯಕ್ರಮದ ಜರುಗಲಿವೆ, ಕರಾವಳಿ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಉಪಮುಖ್ಯಮಂತ್ರಿ‌ ಡಿ.ಕೆ‌ ಶಿವಕುಮಾರ್ ಕಂಬಳದಲ್ಲಿ ಭಾಗಿಯಾಗಿ ಗುರುಪುರ ಕಂಬಳದ ಸಂಭ್ರಮ ಹೆಚ್ಚಿಸಲಿದ್ದಾರೆ, ಮೊದಲ ವರ್ಷದ ಗುರುಪುರ ಕಂಬಳ ಯಶಸ್ವಿಯಾಗಿದ್ದು, ಈ ಬಾರಿ ಗುರುಪುರ ಕಂಬಳವನ್ನು ಹಬ್ಬದ ರೀತಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗುರುಪುರ ಕಂಬಳ ಅದ್ಧೂರಿಯಾಗಿ ಆಕರ್ಷಣಿಯವಾಗಿ ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ನೆರವೇರಲಿ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಶುಭ ಹಾರೈಸಿದರು.

ಏಪ್ರಿಲ್ 12ರ ಶನಿವಾರ ಗುರುಪುರದ ಮಾಣಿಬೆಟ್ಟುಗುತ್ತು ಎದುರಿನ ಗದ್ದೆಯಲ್ಲಿ ಮೂಳೂರು-ಅಡ್ಡೂರು ಜೋಡುಕರೆ ಗುರುಪುರ ಕಂಬಳ ನಡೆಯಲಿದೆ. ಅಂದು ಬೆಳಗ್ಗೆ 8.30ಕ್ಕೆ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಗುರುಪುರ ಕಂಬಳ ಉದ್ಘಾಟಿಸಲಿದ್ದು ಇನಾಯತ್ ಅಲಿ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸ್ಪೀಕರ್ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಮತ್ತು ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಗುರುಪುರ ಕಂಬಳ ಸಮಿತಿ ಮಾಹಿತಿ ನೀಡಿದೆ.

ಗುರುಪುರ ಕಂಬಳದಲ್ಲಿ ಪದವು ಕಾನಡ್ಕದ ದೂಜೆ ಕೋಣದ ನೆನಪಿನಲ್ಲಿ ಅಂಚೆಚೀಟಿ ಬಿಡುಗಡೆಯಾಗಲಿರುವುದು ವಿಶೇಷ. ದೂಜೆ ಕೋಣ ಅಂಚೆಚೀಟಿಯಾದ ಎರಡನೇ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version