Home ಕ್ರೀಡೆ CSK ವಿರುದ್ಧ 35 ರನ್‌ಗಳಿಂದ ಜಯಗಳಿಸಿದ GT ತಂಡದ ನಾಯಕ ಶುಭಮನ್ ಗಿಲ್​ಗೆ 24 ಲಕ್ಷ...

CSK ವಿರುದ್ಧ 35 ರನ್‌ಗಳಿಂದ ಜಯಗಳಿಸಿದ GT ತಂಡದ ನಾಯಕ ಶುಭಮನ್ ಗಿಲ್​ಗೆ 24 ಲಕ್ಷ ರೂ. ದಂಡ

ನವದೆಹಲಿ: ನಿನ್ನೆ ( ಶುಕ್ರವಾರ) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 35 ರನ್‌ಗಳಿಂದ ಜಯಗಳಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್​ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿಧಾನಗತಿಯ ಬೌಲಿಂಗ್​ ಕಾರಣಕ್ಕೆ ಶುಭಮನ್​ಗಿಲ್​ಗೆ ಇದು ಎರಡನೇ ಬಾರಿ ದಂಡ ವಿಧಿಸುತ್ತಿರುವುದಾಗಿದೆ.

ನಾಯಕ ಶುಭಮನ್ ಗಿಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ದಾಖಲಿಸಿದ್ದರು. ಗಿಲ್​ ಇನ್ನಿಂಗ್ಸ್ 9 ಬೌಂಡರಿಗಳು ಮತ್ತು 6 ಸಿಕ್ಸರ್​ಗಳನ್ನು ಒಳಗೊಂಡಿತ್ತು. ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಭರ್ಜರಿ ಶತಕಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಕಳೆದ 3 ಪಂದ್ಯಗಳಿಂದ ಸೋತಿದ್ದ ಜಿಟಿ, ಕೊನೆಗೂ ಲಯಕ್ಕೆ ಮರಳಿತು. ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌‌ಗಾಗಿ ನಾಯಕ ಶುಭಮನ್ ಗಿಲ್‌ಗೆ ದಂಡ ವಿಧಿಸಲಾಗಿದೆ.

ಶುಭಮನ್ ಗಿಲ್‌ಗೆ ಮಾತ್ರವಲ್ಲ, ಚೆನ್ನೈ ಬ್ಯಾಟಿಂಗ್ ವೇಳೆ ನಿಧಾನಗತಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಗುಜರಾತ್ ತಂಡದ ನಾಯಕ ಶುಭ್ ಮನ್ ಗಿಲ್ ಸೇರಿದಂತೆ ಇಡೀ ತಂಡಕ್ಕೆ ಬಿಸಿಸಿಐ ದಂಡ ಹೇರಿದೆ. ತಂಡದ ಇತರ ಎಲ್ಲ ಆಟಗಾರರಿಗೆ ತಲಾ 6 ಲಕ್ಷ ರೂ. ಅಂದರೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿದೆ.

ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 231 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​​ಗೆ 196 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

Join Whatsapp
Exit mobile version