ಆಂಧ್ರಪ್ರದೇಶ: ಟಾಟಾ ಏಸ್ ವಾಹನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಈ ವೇಳೆ ಲಾರಿಯನ್ನು ಪರಿಶೀಲಿಸಿದಾಗ 7 ಬಾಕ್ಸ್‌ಗಳಲ್ಲಿ ತುಂಬಿಸಿಟ್ಟಿದ್ದ ಬರೋಬ್ಬರಿ 7 ಕೋಟಿ ರೂ. ಪತ್ತೆಯಾದ ಘಟನೆ ಆಂಧ್ರಪ್ರದೇಶದ ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ನಡೆದಿದೆ.
ಅಪಘಾತದ ವಿಚಾರ ತಿಳಿದು ಆ ವಾಹನದಲ್ಲಿ ಸುಮಾರು ಏಳು ರಟ್ಟಿನ ಡಬ್ಬಿಗಳನ್ನು ಒಂದು ಗೋಣಿಚೀಲದಿಂದ ಇನ್ನೊಂದು ಚೀಲಕ್ಕೆ ಸಾಗಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಪೊಲೀಸರು ವಾಹನದಿಂದ ಏಳು ಬಾಕ್ಸ್‌ಗಳಲ್ಲಿ ತುಂಬಿದ್ದ 7 ಕೋಟಿ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ನಗದು ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. 7 ಕೋಟಿ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಳೆದ ಗುರುವಾರವಷ್ಟೇ ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ ಟ್ರಕ್‌ನಲ್ಲಿ ದಾಖಲೆ ಇಲ್ಲದ 8 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಪೈಪ್ ತುಂಬಿದ ಟ್ರಕ್‌ನ ರಹಸ್ಯ ವಿಭಾಗದಲ್ಲಿ ಹಣವನ್ನು ಬಚ್ಚಿಡಲಾಗಿತ್ತು.
ಮೇ 13ರಂದು ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಜೊತೆಗೆ ವಿಧಾನಸಭೆಯ 175 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.