ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು 2024ರ ಮೇ ತಿಂಗಳವರೆಗೂ ವಿಸ್ತರಿಸಲು ನಾವು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ -ಬಿಕೆಯು ಮುಖಂಡ ರಾಕೇಶ್ ಟಿಕೈಟ್ ಭಾನುವಾರ ಹೇಳಿದ್ದಾರೆ
ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು “ಸೈದ್ಧಾಂತಿಕ ಕ್ರಾಂತಿ” ಎಂದು ಅವರು ಬಣ್ಣಿಸಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸರ್ಕಾರ ಕಾನೂನು ಖಾತರಿ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಎಷ್ಟು ದಿನ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ, ಟಿಕೈಟ್, “ನಾವು 2024 ರ ಮೇ ತಿಂಗಳವರೆಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ, ಮೂರು ಕಾನೂನುಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಕಾನೂನು ಖಾತರಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ದೇಶದ ಮುಂದಿನ ಲೋಕಸಭಾ ಚುನಾವಣೆ 2024ರ ಏಪ್ರಿಲ್-ಮೇನಲ್ಲಿ ನಡೆಯಲಿದೆ. ಪ್ರತಿಭಟನೆಯನ್ನು “ಶ್ರೀಮಂತ ರೈತರು” ಉತ್ತೇಜಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಹಲವು ಗ್ರಾಮಗಳು, ಹಳ್ಳಿಗಳು ಮತ್ತು ವಿವಿಧ ಸಂಘಟನೆಗಳ ರೈತರು ಪ್ರತಿಭಟನೆಯಲ್ಲಿ ಸೇರಿದ್ದಾರೆ ಎಂದು ಹೇಳಿದರು.