ತ್ರಿಪುರಾ ಕಾಂಗ್ರೆಸ್ ಮುಖ್ಯಸ್ಥ ಪಿಜುಶ್ ಬಿಸ್ವಾಸ್ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪು ದಾಳಿ ನಡೆಸಿದ ಪರಿಣಾಮ ಕಾಂಗ್ರೆಸ್ ಮುಖಂಡ ಬಿಸ್ವಾಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸರ ಉಪಸ್ಥಿತಿಯಲ್ಲೇ ತಮ್ಮ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಸ್ವಾಸ್ ಆರೋಪಿಸಿದ್ದಾರೆ.
ಅಗರ್ತಲಾದಿಂದ 20 ಕಿ.ಮೀ.ದೂರದಲ್ಲಿರುವ ಬಿಶಾಲ್ ಗರ್ ಕಾಂಗ್ರೆಸ್ ಕಚೇರಿಯ ಹೊರಗಡೆ ಈ ದಾಳಿ ನಡೆದಿದೆ. ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಬಿಸ್ವಾಸ್ ತಿಳಿಸಿದ್ದಾರೆ.
ದಾಳಿಯ ಪರಿಣಾಮ ಕಾರಿಗೂ ಹಾನಿಯಾಗಿದ್ದು, ಘಟನೆಯಲ್ಲಿ ಇತರ ಹಲವು ಕಾಂಗ್ರೆಸ್ ಕಾರ್ಯಕರ್ತರು ಕೂಡ ಗಾಯಗೊಂಡಿದ್ದಾರೆ.
ದಾಳಿಯನ್ನು ಖಂಡಿಸಿ 12 ಗಂಟೆಗಳ ಕಾಲ ರಾಜ್ಯಾದ್ಯಂತ ಬಂದ್ ಗೆ ತ್ರಿಪುರಾ ಕಾಂಗ್ರೆಸ್ ಕರೆ ನೀಡಿದೆ.