ನವದೆಹಲಿ: ಇಂದಿನ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಇಂದು ವಿಪಕ್ಷಗಳ 19 ರಾಜ್ಯಸಭಾ ಸಂಸದರನ್ನು ಒಂದು ವಾರಕ್ಕೆ ಅಮಾನತುಗೊಳಿಸಲಾಗಿದೆ.
ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆಯಲಾಗಿದೆ ಬಿಜೆಪಿ ಮುಖಂಡ ಪಿಯೂಷ್ ಗೋಯಲ್ ಹೇಳಿದ್ದಾರೆ. ಅವರು ಸಭಾಪತಿಯ ಮನವಿಗಳನ್ನು ನಿರ್ಲಕ್ಷಿಸುತ್ತಲೇ ಇದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೇತರಿಸಿಕೊಂಡು ಸಂಸತ್ತಿಗೆ ಮರಳಿದ ಬಳಿಕ ಬೆಲೆಯೇರಿಕೆ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಸಂಯಮದಿಂದ ವರ್ತಿಸುವಂತೆ ಸ್ಪೀಕರ್ ಓಂ ಬಿರ್ಲಾ ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿಕೊಂಡು ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದಿದ್ದಕ್ಕಾಗಿ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಆಗಸ್ಟ್ 12 ರಂದು ಮುಂಗಾರು ಅಧಿವೇಶನ ಕೊನೆಗೊಳ್ಳುವರೆಗೂ ಅಮಾನತು ಮಾಡಲಾಗಿತ್ತು.
ಈ ಮಧ್ಯೆ ಅಮಾನತುಗೊಂಡ ಪ್ರತಿಪಕ್ಷದ ಸಂಸದರು ಸದನದಿಂದ ಹೊರ ಹೋಗದೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು.
ಸರ್ಕಾರ ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮಾನತುಗೊಂಡ ರಾಜ್ಯಸಭಾ ಸಂಸದರ ಪಟ್ಟಿ ಇಂತಿವೆ:
1) ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್
2) ಮೌಸಮ್ ನೂರ್, ತೃಣಮೂಲ ಕಾಂಗ್ರೆಸ್
3) ಶಾಂತಾ ಛೆಟ್ರಿ, ತೃಣಮೂಲ ಕಾಂಗ್ರೆಸ್
4) ದೋಲಾ ಸೇನ್, ತೃಣಮೂಲ ಕಾಂಗ್ರೆಸ್
5) ಸಂತಾನು ಸೇನ್, ತೃಣಮೂಲ ಕಾಂಗ್ರೆಸ್
6) ಅಭಿ ರಂಜನ್ ಬಿಸ್ವರ್, ತೃಣಮೂಲ ಕಾಂಗ್ರೆಸ್
7) ಎಂಡಿ ನಾದಿಮುಲ್ ಹಕ್, ತೃಣಮೂಲ ಕಾಂಗ್ರೆಸ್
8) ಎಂ ಹಮಮದ್ ಅಬ್ದುಲ್ಲಾ, ಡಿಎಂಕೆ
9) ಬಿ ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)
10) ಎ.ಎ. ರಹೀಮ್, ಸಿಪಿಐಎಂ
11) ರವಿಹಂದ್ರ ವಡ್ಡಿರಾಜು, ಟಿ.ಆರ್.ಎಸ್.
12) ಎಸ್ ಕಲ್ಯಾಣಸುಂದರಂ, ಡಿಎಂಕೆ
13) ಆರ್ ಗಿರಂಜನ್, ಡಿಎಂಕೆ
14) ಎನ್ ಆರ್ ಇಲಾಂಗೋ, ಡಿಎಂಕೆ
15) ವಿ ಶಿವದಾಸನ್, ಸಿಪಿಐಎಂ
16) ಎಂ ಷಣ್ಮುಗಂ, ಡಿಎಂಕೆ
17) ದಾಮೋದರ ರಾವ್ ದಿವಕೊಂಡ, ಟಿ.ಆರ್.ಎಸ್.
18) ಸಂತೋಷ್ ಕುಮಾರ್ ಪಿ, ಸಿಪಿಐ
19) ಕನಿಮೊಳಿ ಎನ್ವಿಎನ್ ಸೋಮು, ಡಿಎಂಕೆ
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ, ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದ್ದು, ಇದು ಸದನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ನಿಯಮ 267 ಅಡಿಯಲ್ಲಿ ಚರ್ಚೆಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
“ನೀವು ನಮ್ಮನ್ನು ಅಮಾನತುಗೊಳಿಸಬಹುದು. ಆದರೆ ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇದು ಶೋಚನೀಯ ಪರಿಸ್ಥಿತಿ – ನಮ್ಮ ಗೌರವಾನ್ವಿತ ಸಂಸದರು ಜನರ ಸಮಸ್ಯೆಗಳ ಮೇಲೆ ಚರ್ಚೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಅಮಾನತುಗೊಳಿಸಲಾಗುತ್ತಿದೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆ? ಸಂಸತ್ತಿನ ಪಾವಿತ್ರ್ಯವು ಹೆಚ್ಚು ಕಾಲ ಉಳಿಯಲಿದೆ ” ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.