Home ಟಾಪ್ ಸುದ್ದಿಗಳು ಬಕೆಟ್ ರಾಜಕಾರಣವನ್ನು ಸಿ.ಟಿ ರವಿಯನ್ನು ನೋಡಿ ಕಲಿಯಬೇಕು: ಝಮೀರ್ ಅಹ್ಮದ್ ಖಾನ್ ತಿರುಗೇಟು

ಬಕೆಟ್ ರಾಜಕಾರಣವನ್ನು ಸಿ.ಟಿ ರವಿಯನ್ನು ನೋಡಿ ಕಲಿಯಬೇಕು: ಝಮೀರ್ ಅಹ್ಮದ್ ಖಾನ್ ತಿರುಗೇಟು

ಚಿತ್ರದುರ್ಗ: ಬಿಜೆಪಿಯ ಸಿ.ಟಿ ರವಿ ಅವರು 2007ರಲ್ಲಿ ಎಲ್ಲಿ ಬಂದು ಯಾರ ಬಳಿ ಮತ್ತು ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ. ಮತ್ತೊಬ್ಬರಿಗೆ ಬಕೆಟ್ ರಾಜಕಾರಣಿ ಎಂದು ಹೇಳುವ ನೈತಿಕತೆಯೇ ಅವರಿಗಿಲ್ಲ ಎಂದು ಚಾಮರಾಜಪೇಟೆ ಶಾಸಕ ಮತ್ತು ಮಾಜಿ ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು, ಜಿಲ್ಲೆಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವ ವೇಳೆ, ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ನಾನು ಒಕ್ಕಲಿಗರ ಬಗ್ಗೆ ಏನಾದರೂ ತಪ್ಪಾಗಿ ಮಾತನಾಡಿದ್ದರೆ, ತೋರಿಸಲಿ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ನಿನ್ನೆಯೇ ನಾನು ಬಿಡಿಸಿ ಹೇಳಿದ್ದೇನೆ. ಎಚ್ ಡಿ ದೇವೇಗೌಡರೇ ನನ್ನ ರಾಜಕೀಯ ಗುರುಗಳು. ನಾನು ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ. ಉಪ ಚುನಾವಣೆ ವೇಳೆ ದೇವೇಗೌಡರು ನನಗಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. 2023ರ ಚುನಾವಣೆಗಾಗಿ ನನ್ನ ವಿರುದ್ಧ ಹೀಗೆ ಇಲ್ಲದ ಗಿಮಿಕ್ ಮಾಡಲಾಗುತ್ತಿದೆ. ಸಿ.ಟಿ ರವಿ ಅವರಿಗೆ ಮತ್ತೊಬ್ಬರನ್ನು ಬಕೆಟ್ ರಾಜಕಾರಣಿ ಎಂದು ಕರೆಯುವ ನೈತಿಕತೆಯೇ ಇಲ್ಲ. 2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಸದಾಶಿವನಗರದ ಗೆಸ್ಟ್ ಹೌಸಿಗೆ ಬಂದು ಯಾರ ಬಳಿ, ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದಕ್ಕೆ ನಾನೇ ಸಾಕ್ಷಿ ಇದ್ದೇನೆ. ಮೊದಲು ಅದನ್ನು ನೆನಪಿಸಿಕೊಳ್ಳಲಿ. ಬಕೆಟ್ ರಾಜಕಾರಣವನ್ನು ಅವರನ್ನು ನೋಡಿ ಕಲಿಬೇಕು ಎಂದು ಖಾನ್ ಉತ್ತರಿಸಿದರು.

ಎಲ್ಲ ರಾಜಕಾರಣಿಗಳಿಗೂ ಅಧಿಕಾರದ ಆಸೆ ಇರುತ್ತದೆ. ಹಾಗಂತ ನಾವು ಬಿಜೆಪಿ ನಾಯಕರಂತೆ ಜಾತಿ ರಾಜಕಾರಣ ಮಾಡಲು ಹೋಗುವುದಿಲ್ಲ. ನನಗೆ ಹೈಕಮಾಂಡ್ ಯಾವುದೇ ನೋಟೀಸ್ ನೀಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಸುರ್ಜೇವಾಲ ಅವರು ಮಾತ್ರ ದೂರವಾಣಿ ಕರೆ ಮಾಡಿ, ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ಇದೆಲ್ಲ ಬೇಡ, ಇಲ್ಲಿಗೇ ನಿಲ್ಲಿಸಿ ಅಂದಿದ್ದಾರೆ. ನಾವು ಸುಮ್ಮನಾಗಿದ್ದೇವೆ ಅಷ್ಟೇ ಎಂದು ಅವರು ಹೇಳಿದರು.

Join Whatsapp
Exit mobile version