Home ಟಾಪ್ ಸುದ್ದಿಗಳು ಸುಳ್ಳು ಪ್ರಕರಣ ದಾಖಲಿಸಿ ಪಾಪ್ಯುಲರ್ ಫ್ರಂಟ್ ನಾಯಕನಿಗೆ ಕಿರುಕುಳ: ಪಿಎಸ್ಐ, ತನಿಖಾಧಿಕಾರಿಗೆ ನ್ಯಾಯಾಲಯ ಸಮನ್ಸ್

ಸುಳ್ಳು ಪ್ರಕರಣ ದಾಖಲಿಸಿ ಪಾಪ್ಯುಲರ್ ಫ್ರಂಟ್ ನಾಯಕನಿಗೆ ಕಿರುಕುಳ: ಪಿಎಸ್ಐ, ತನಿಖಾಧಿಕಾರಿಗೆ ನ್ಯಾಯಾಲಯ ಸಮನ್ಸ್

100 ರೂ. ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಮುಹಮ್ಮದ್ ಮೆಹಬೂಬ್ ಗೋಗಿ

ಯಾದಗಿರಿ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಹೋದ ಪಾಪ್ಯುಲರ್ ಫ್ರಂಟ್ ನಾಯಕರೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಿ ಅವರ ಜೀವಿಸುವ ಹಕ್ಕಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಪಿಎಸ್ ಐ ಹಾಗೂ ತನಿಖಾಧಿಕಾರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಯಾದಗಿರಿ ನಗರ ಪೊಲೀಸ್ ಠಾಣೆಯ ಪಿಎಸ್ ಐ ಮಲ್ಲಿಕಾರ್ಜುನ ಡಪ್ಪಿನ ಮತ್ತು ತನಿಖಾಧಿಕಾರಿ ಎನ್. ವೈ. ಗುಂಡೂರಾವ್ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಘಟನೆಯ ಹಿನ್ನೆಲೆ:

2013, ಡಿಸೆಂಬರ್ 6ರಂದು ಪಾಪ್ಯುಲರ್ ಫ್ರಂಟ್ ಜಿಲ್ಲಾ ಮುಖಂಡ ಮುಹಮ್ಮದ್ ಮೆಹಬೂಬ್ ಗೋಗಿ ಹಾಗೂ ಇತರರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ ಮನವಿ ಕೊಡಲು ಬಂದವರನ್ನು ಕಂಡು ಆಕ್ರೋಶಗೊಂಡ ಪಿಎಸ್ ಐ ಮಲ್ಲಿಕಾರ್ಜುನ ಅವರು ಎಫ್ ಐಆರ್ ದಾಖಲಿಸಿದ್ದರು.

ಅಕ್ರಮ ಕೂಟ ರಚಿಸಿಕೂಂಡು ಡಿಸಿ ಕಚೇರಿ ಮುಖ್ಯದ್ವಾರದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಘೋಷಣೆಯನ್ನು ಕೂಗಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಅಡೆತಡೆ ಉಂಟು ಮಾಡಿದ್ದಾರೆ ಎಂದು ಮುಹಮ್ಮದ್ ಮಹೆಬೂಬ್ ಗೋಗಿ ಮತ್ತು ಇತರರ ವಿರುದ್ಧ ಪಿಎಸ್ ಐ ಮಲ್ಲಿಕಾರ್ಜುನ ಎಫ್ ಐಆರ್ ದಾಖಲಿಸಿದ್ದರು. ಎನ್. ವೈ. ಗುಂಡೂರಾವ್ ಪ್ರಕಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನಂತರ ಪ್ರಕರಣ ಎಲ್ಲಾ ಸಾಕ್ಷಗಳನ್ನು ಪರಿಗಣಿಸಿದ ನ್ಯಾಯಾಲಯ ಮುಹಮ್ಮದ್ ಮೆಹಬೂಬ್ ಗೋಗಿ ಮತ್ತು ಇತರರನ್ನು ಮಣಿಸುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲು ಮಾಡಿರುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟು ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.

5-6 ವರ್ಷ ತಮಗೆ ತೊಂದರೆ ಉಂಟು ಮಾಡಿ, ಸ್ವತಂತ್ರವಾಗಿ ಜೀವಿಸುವ ಹಕ್ಕಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಶಹಾಪುರದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಮುಹಮ್ಮದ್ ಮೆಹಬೂಬ್ ಗೋಗಿ ದೂರು ಸಲ್ಲಿಸಿದ್ದರು. ಪಿಎಸ್ ಐ ಮಲ್ಲಿಕಾರ್ಜುನ ಡಪ್ಪಿನ ಮತ್ತು ತನಿಖಾಧಿಕಾರಿ ಎನ್. ವೈ. ಗುಂಡೂರಾವ್ ವಿರುದ್ಧ 100 ರೂ. ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣವು ನ್ಯಾಯವಾದಿ ಮುಹಮ್ಮದ್ ಗೌಸ ಗೋಗಿ ದಾಖಲಿಸಿದ್ದಾರೆ. ಸಿವಿಲ್ ನ್ಯಾಯಾಲಯದಿಂದ ಪ್ರತಿವಾದಿಗಳಾದ ಪಿಎಸ್ ಐ ಮಲ್ಲಿಕಾರ್ಜುನ ಡಪ್ಪಿನ ಮತ್ತು ತನಿಖಾಧಿಕಾರಿ ಎನ್ ವೈ ಗುಂಡೂರಾವ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ನವೆಂಬರ್ 11ರಂದು ಮುಂದಿನ ವಿಚಾರಣೆ ನಡೆಯಲಿದೆ.

Join Whatsapp
Exit mobile version