Home ಟಾಪ್ ಸುದ್ದಿಗಳು 20 ವರ್ಷಗಳಲ್ಲಿ 1,888 ಕಸ್ಟಡಿ ಸಾವು: 26 ಪೊಲೀಸರಿಗಷ್ಟೇ ಶಿಕ್ಷೆ

20 ವರ್ಷಗಳಲ್ಲಿ 1,888 ಕಸ್ಟಡಿ ಸಾವು: 26 ಪೊಲೀಸರಿಗಷ್ಟೇ ಶಿಕ್ಷೆ

ನವದೆಹಲಿ : ಕಳೆದ 20 ವರ್ಷಗಳಲ್ಲಿ, ದೇಶಾದ್ಯಂತ 1,888 ಕಸ್ಟಡಿ ಸಾವುಗಳು ಸಂಭವಿಸಿದ್ದು, ಪೊಲೀಸ್ ಸಿಬ್ಬಂದಿಯ ವಿರುದ್ಧ 893 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 358 ಸಿಬ್ಬಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿವೆ. ಆದರೆ ಈ ಅವಧಿಯಲ್ಲಿ ಕೇವಲ 26 ಪೊಲೀಸರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ.


2001-2020ರ ವರೆಗಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ಅಪರಾಧ (ಸಿಐಐ) ವರದಿಗಳಿಂದ ಸಂಗ್ರಹಿಸಲಾದ ದಾಖಲೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಕಳೆದ ಮಂಗಳವಾರ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾದ 22 ವರ್ಷದ ಅಲ್ತಾಫ್ ಎಂಬ ಮುಸ್ಲಿಮ್ ಯುವಕನ ಕಸ್ಟಡಿ ಸಾವಿನ ಹಿನ್ನೆಲೆಯಲ್ಲಿ ಈ ಅಂಕಿಅಂಶ ಈಗ ಮಹತ್ವ ಪಡೆದುಕೊಂಡಿದೆ.


ಘಟನೆಯ ನಂತರ, ಕಾಸ್ ಗಂಜ್ ನ ಕೊತ್ವಾಲಿ ಪೊಲೀಸ್ ಠಾಣೆಯ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಲ್ತಾಫ್ ಕಿರಿದಾದ ಶೌಚಾಲಯದಲ್ಲಿ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ, ನೆಲದಿಂದ ಕೇವಲ ಒಂದೆರಡು ಅಡಿ ಎತ್ತರದಲ್ಲಿರುವ ಶೌಚಾಲಯದಲ್ಲಿ ನೀರಿನ ಪೈಪ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಈ ಹೇಳಿಕೆ ಸಂಶಯಕ್ಕೆಡೆ ಮಾಡಿದೆ.


ಕಸ್ಟಡಿ ಸಾವಿನ ಬಗ್ಗೆ ಇಲಾಖಾ ತನಿಖೆ ಮತ್ತು ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಅಧಿಕಾರಿಗಳು ತಿಳಿಸಿದ್ದಾರೆ.ಎನ್ ಸಿಆರ್ ಬಿ ದತ್ತಾಂಶ ಪ್ರಕಾರ, 2006ರಲ್ಲಿ ಅತಿ ಹೆಚ್ಚು ಪೊಲೀಸರು ಅಂದರೆ 11 ಮಂದಿ ಪೊಲೀಸ್ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದಾರೆ. ಕಸ್ಟಡಿ ಸಾವು ಪ್ರಕರಣಗಳಲ್ಲಿ ಉತ್ತರ ಪ್ರದೇಶದಲ್ಲಿ ಏಳು ಮತ್ತು ಮಧ್ಯಪ್ರದೇಶದಲ್ಲಿ ನಾಲ್ವರು ಪೊಲೀಸರು ಅಪರಾಧಿಗಳೆಂದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೊಳಗಾದವರು ಎಂದು ಅಂಕಿಅಂಶ ತೋರಿಸುತ್ತದೆ.


ಆದಾಗ್ಯೂ, ಪೊಲೀಸ್ ಕಸ್ಟಡಿಯಲ್ಲಿ ಸಾವುಗಳು ವರದಿಯಾದ ಅದೇ ವರ್ಷಕ್ಕೆ ಶಿಕ್ಷೆಯ ಸಂಖ್ಯೆ ಸಂಬಂಧಿಸಿದೆಯೇ ಎಂದು ದತ್ತಾಂಶವು ನಿರ್ದಿಷ್ಟಪಡಿಸುವುದಿಲ್ಲ.
ಇತ್ತೀಚಿನ ದತ್ತಾಂಶದ ಪ್ರಕಾರ, 2020 ರಲ್ಲಿ 76 ಕಸ್ಟಡಿ ಸಾವುಗಳು ವರದಿಯಾಗಿವೆ, ಗುಜರಾತ್ ನಲ್ಲಿ ಅತಿ ಹೆಚ್ಚು, 15 ಸಾವುಗಳು ವರದಿಯಾಗಿವೆ. ಉಳಿದಂತೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಡ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಸ್ಟಡಿ ಸಾವುಗಳು ಸಂಭವಿಸಿವೆ. ಆದಾಗ್ಯೂ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿಗೆ ಶಿಕ್ಷೆಯಾಗಿಲ್ಲ.


2017 ರಿಂದ, ಎನ್ ಸಿಆರ್ ಬಿ ಕಸ್ಟಡಿ ಸಾವಿನ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಪೊಲೀಸರ ದತ್ತಾಂಶವನ್ನು ಬಿಡುಗಡೆ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಬಂಧನದಲ್ಲಿರುವ ಸಾವುಗಳಿಗೆ ಸಂಬಂಧಿಸಿದಂತೆ 96 ಪೊಲೀಸರನ್ನು ಬಂಧಿಸಲಾಗಿದೆ. ಆದಾಗ್ಯೂ, ಇದಕ್ಕೂ ಮೊದಲಿನ ಡಾಟಾ ಲಭ್ಯವಿಲ್ಲ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ದತ್ತಾಂಶದಿಂದ ಒಟ್ಟಾಗಿಸಿ ಎನ್ ಸಿಆರ್ ಬಿ, “ಪೊಲೀಸ್ ಕಸ್ಟಡಿ/ಲಾಕಪ್ ನಲ್ಲಿ ನ ಸಾವುಗಳನ್ನು” ಎರಡು ರೀತಿಯಾಗಿ ವರ್ಗೀಕರಿಸಿದೆ.

ರಿಮಾಂಡ್ ನಲ್ಲಿಲ್ಲದ ವ್ಯಕ್ತಿಗಳು ಮತ್ತು ರಿಮಾಂಡ್ ನಲ್ಲಿರುವ ವ್ಯಕ್ತಿಗಳು ಎಂದು ವರ್ಗೀಕರಿಸಲಾಗಿದೆ.
ಮೊದಲ ವರ್ಗದಲ್ಲಿ ಬಂಧಿಸಲ್ಪಟ್ಟವರು ಆದರೆ ಇನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸದವರು ಮತ್ತು ಎರಡನೆಯ ವರ್ಗ, ಪೊಲೀಸ್ /ನ್ಯಾಯಾಂಗ ಬಂಧನದಲ್ಲಿರುವವರನ್ನು ಒಳಗೊಂಡಿದೆ.
ಅಂಕಿಅಂಶ ಪ್ರಕಾರ, 2001 ರಿಂದ, “ರಿಮಾಂಡ್ ನಲ್ಲಿಲ್ಲದ ವ್ಯಕ್ತಿಗಳು” ವಿಭಾಗದಲ್ಲಿ 1,185 ಕಸ್ಟಡಿ ಸಾವುಗಳು ಮತ್ತು “ರಿಮಾಂಡ್ ನಲ್ಲಿರುವ ವ್ಯಕ್ತಿಗಳು” ವರ್ಗದಲ್ಲಿ 703 ಸಾವುಗಳು ಸಂಭವಿಸಿವೆ ಎಂದು ತೋರಿಸುತ್ತದೆ.


ಕಳೆದ ಎರಡು ದಶಕಗಳಲ್ಲಿ ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯ ವಿರುದ್ಧ ದಾಖಲಾದ 893 ಪ್ರಕರಣಗಳಲ್ಲಿ 518 ರಿಮಾಂಡ್ ನಲ್ಲಿ ಇಲ್ಲದವರಿಗೆ ಸಂಬಂಧಿಸಿವೆ.
“ಪೊಲೀಸರು ಈ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡುವುದಿಲ್ಲ. ಅವರು ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ, ಇದು ಖಂಡಿತವಾಗಿಯೂ ತಪ್ಪು. ಒಬ್ಬ ವ್ಯಕ್ತಿಯು ಬಂಧನದಲ್ಲಿ ಸತ್ತಾಗ, ಅದಕ್ಕೆ ಕಾರಣರಾದ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡಬೇಕು ಮತ್ತು ಪೊಲೀಸರು ಅವನಿಗೆ ಸರಿಯಾದ ಶಿಕ್ಷೆವಿಧಿಸುವಂತೆ ನೋಡಿಕೊಳ್ಳಬೇಕು” ಎಂದು ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಹೇಳುತ್ತಾರೆ.

Join Whatsapp
Exit mobile version