ನವದೆಹಲಿ: ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಅಜ್ಮೀರ್ ಷರೀಫ್ ದರ್ಗಾಕ್ಕೆ ಚಾದರ್ ಅನ್ನು ಉಡುಗೊರೆಯಾಗಿ ಕಳುಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಸಂಪ್ರದಾಯದಂತೆ ನಡೆದುಕೊಂಡಿದ್ದಾರೆ. ಅಜ್ಮೀರ್ ದರ್ಗಾದ ವಿಚಾರದಲ್ಲಿ ಹಿಂದೂ ಸೇನೆಯು ವಿವಾದವೆಬ್ಬಿಸಿ ಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾದರ್ ಅನ್ನು ಉಡುಗೊರೆಯಾಗಿ ನೀಡಿದ್ದು, ಮೋದಿ ಅವರು ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಚಾದರ್ ಶೀಟ್ ಹಸ್ತಾಂತರಿಸಿದ್ದಾರೆ.
ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಚಾದರ್ ಅನ್ನು ಅರ್ಪಿಸಲಿದ್ದಾರೆ. ಉಡುಗೊರೆಯಾಗಿ ನೀಡಿದ ಚಾದರ್ ಅನ್ನು ನಿಜಾಮುದ್ದೀನ್ ಔಲಿಯಾಗೆ ಕೊಂಡೊಯ್ದ ನಂತರ ಅದನ್ನು ಶನಿವಾರ ಅಜ್ಮೀರ್ ಶರೀಫ್ ದರ್ಗಾಕ್ಕೆ ಕೊಂಡೊಯ್ಯಲಾಗುತ್ತದೆ.
ಈ ಸಂಬಂಧ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೂಫಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಅಜ್ಮೀರ್ ದರ್ಗಾದ ಗದ್ದೀ ನಶೀನ್ ಆಗಿರುವ ಹಾಜಿ ಸೈಯದ್ ಸಲ್ಮಾನ್ ಚಿಸ್ತಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಿಂದಲೂ ಅಜ್ಮೀರ್ ದರ್ಗಾಕ್ಕೆ ಚಾದರ್ ನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಾವು ಪ್ರಧಾನಿಯವರು ನೀಡಿದ ಚಾದರ್ ಅನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದಿರುವ ಅಜ್ಮೀರ್ ದರ್ಗಾ ಮುಖ್ಯಸ್ಥ ನಸ್ರುದ್ದೀನ್ ಚಿಶ್ತಿ, 1947 ರಿಂದ ಪ್ರತಿ ಪ್ರಧಾನಿಗಳು ಗೌರವದ ಸಂಕೇತವಾಗಿ ಖ್ವಾಜಾ ಗರೀಬ್ ನವಾಜ್ ಅವರ ಆಸ್ಥಾನಕ್ಕೆ ಚಾದರ್‌ಗಳನ್ನು ಕಳುಹಿಸುವುದು ದೇಶದ ಸಂಪ್ರದಾಯವಾಗಿದೆ. 2014 ರಿಂದ ಪ್ರಧಾನಿ ಮೋದಿ ಕೂಡ ಇದನ್ನು ಅನುಸರಿಸುತ್ತಿದ್ದಾರೆ. ಈ ಸಂಪ್ರದಾಯದ ಮೂಲಕ ನರೇಂದ್ರ ಮೋದಿ ಅವರು ನಮ್ಮ ದೇಶದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಿ ಮೋದಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರಿಗೆ ಅಜ್ಮೀರ್ ಉರೂಸ್ ಹಿನ್ನೆಲೆ ಚಾದರ ಸಮರ್ಪಿಸುವ ಫೋಟೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಿರಣ್ ರಿಜಿಜು ಅವರ ಪೋಸ್ಟ್ ನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರೂಸ್ ಸಮಾರಂಭದ ಶುಭಾಶಯಗಳು. ಈ ಸಂದರ್ಭ ದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಲೆಸಲಿ ಎಂದು ಬರೆದುಕೊಂಡಿದ್ದಾರೆ.