ಗಣರಾಜ್ಯೋತ್ಸವದ ದಿನದಂದು ನವದೆಹಲಿಗೆ ರೈತರ ಟ್ರ್ಯಾಕ್ಟರ್ ಜಾಥಾಗೆ ಅನುಮತಿ ನೀಡುವುದು ಅಥವಾ ನೀಡದಿರುವ ನಿರ್ಧಾರ ದಿಲ್ಲಿ ಪೊಲೀಸರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಜನವರಿ 26ರಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಜಾಥಾ ವಿರುದ್ಧ ತಡೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದೆ. ದೆಹಲಿಗೆ ಯಾರು ಪ್ರವೇಶಿಸಬಹುದು ಎಂಬುದನ್ನು ಅಲ್ಲಿನ ಪೊಲೀಸರು ನಿರ್ಧರಿಸಬೇಕು. ನೀವು ಏನು ಮಾಡಬೇಕೆಂದು ನಾವು ನಿಮಗೆ ಹೇಳುವುದಿಲ್ಲ. ನಾವು ಈ ವಿಷಯದ ವಿಚಾರಣೆಯನ್ನು ಜನವರಿ 20 ರಂದು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠ ಹೇಳಿತು.
ಗಣರಾಜ್ಯೋತ್ಸವ ದಿನಾಚರಣೆಯಂದು ರೈತರ ಪ್ರಸ್ತಾವಿತ ಟ್ರ್ಯಾಕ್ಟರ್ ಜಾಥಾ ಅಥವಾ ರೈತರು ನಡೆಸುವ ಯಾವುದೇ ರೀತಿಯ ಪ್ರತಿಭಟನೆಗೆ ತಡೆಯಾಜ್ಞೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ ಕೇಂದ್ರ ಸರ್ಕಾರದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತು. ಇದಕ್ಕೆ ಇದಕ್ಕೆ ಉತ್ತರಿಸಿದ ನ್ಯಾಯಾಲಯ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಇರುವ ಅಧಿಕಾರದ ಬಗ್ಗೆ ನಾವು ಕೇಂದ್ರ ಸರಕಾರಕ್ಕೆ ಹೇಳಬೇಕಿಲ್ಲ ಎಂದು ಸ್ಪಷ್ಟಪಡಿಸಿತು.
ಗಣರಾಜ್ಯೋತ್ಸವ ಪೆರೇಡ್ ಗೆ ಅಡ್ಡಿಪಡಿಸಲು ಯತ್ನಿಸುವ ಅಥವಾ ಅಡ್ಡಿಪಡಿಸುವ ಘಟನೆಗಳು ದೇಶಕ್ಕೆ ಮುಜುಗರ ಉಂಟು ಮಾಡಲಿದೆ ಎಂದು ಕೇಂದ್ರ ಸರಕಾರ, ದಿಲ್ಲಿ ಪೊಲೀಸರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.