ಮಹಿಳೆಯರ ಮದುವೆಯ ವಯಸ್ಸನ್ನು ಮರುಪರಿಶೀಲಿಸಲು ರಚಿಸಲಾಗಿರುವ ಕಾರ್ಯಪಡೆ ತನ್ನ ವರದಿಯನ್ನು ಪ್ರಧಾನ ಮಂತ್ರಿ ಕಚೇರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಾರ್ಯಪಡೆ ಡಿಸೆಂಬರ್ ಅಂತ್ಯಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಐದು ತಿಂಗಳ ವಿಳಂಬದ ನಂತರ ಸಲ್ಲಿಸಿದ ವರದಿಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಸಮಿತಿಯ ಅಧ್ಯಕ್ಷೆ ಜಯಾ ಜೇಟ್ಲಿ ನಿರಾಕರಿಸಿದ್ದಾರೆ.
ಯುವತಿಯರ ವಿವಾಹದ ವಯಸ್ಸನ್ನು ಪರಿಷ್ಕರಿಸಲು ಕಳೆದ ವರ್ಷ ಜೂನ್‌ನಲ್ಲಿ ಸಮಿತಿ ರಚಿಸಲಾಗಿತ್ತು. ಅದರ ವರದಿಯನ್ನು 2020ರ ಜುಲೈ 31ರೊಳಗೆ ಸಲ್ಲಿಸಲು ಸೂಚಿಸಲಾಗಿತ್ತು.
ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸುವ ಸಂಬಂಧ ಸಮಿತಿಯು ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮಹಿಳೆಯರ “ಮದುವೆಯ ವಯಸ್ಸು” ನಿರ್ಧರಿಸಲು ರಚಿಸಲಾದ ಸಮಿತಿಯ ಕುರಿತು ಪ್ರಸ್ತಾಪಿಸಿದ್ದರು.
ಮಹಿಳೆಯರ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವ ಸಲಹೆಯನ್ನು ಮಹಿಳೆಯರ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ. ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಯುವತಿಯರನ್ನು ಜೈಲಿಗೆ ಹಾಕಲು ಇದನ್ನು ಬಳಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.