Home ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ; ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ; ಸಿದ್ದರಾಮಯ್ಯ

ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಯುಪಿಎ ಸರ್ಕಾರದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ್ದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಯುಪಿಎಗಿಂತ ತಮ್ಮ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂದು ಒಂದಷ್ಟು ಸುಳ್ಳು ಅಂಕಿ-ಅಂಶಗಳನ್ನು ಮುಂದಿಟ್ಟು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವ್ಯಾಪಾರದಲ್ಲಿ ನುರಿತ ಗುಜರಾತಿಗಳು ಲೆಕ್ಕದಲ್ಲಿ ಪಕ್ಕಾ ಎನ್ನುವ ಅಭಿಪ್ರಾಯ ಇದೆ. ಆದರೆ ಆ ರಾಜ್ಯದವರಾದ ಪ್ರಧಾನಿ ಮತ್ತು ಗೃಹಸಚಿವರು ಬಾಯಿಬಿಟ್ಟರೆ ಸುಳ್ಳು ಲೆಕ್ಕಗಳೇ ಉದುರುತ್ತವೆ. ಗೃಹಸಚಿವ ಅಮಿತ್ ಶಾ ಮತ್ತೊಮ್ಮೆ ಸುಳ್ಳುಗಳ ಮೂಟೆ ಉರುಳಿಸಿಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ದುಡ್ಡು ಭಿಕ್ಷೆ ಅಲ್ಲ, ಅದು ನ್ಯಾಯಬದ್ದವಾಗಿ ನಮಗೆ ಸಿಗಬೇಕಾಗಿರುವ ಪಾಲು. ಕರ್ನಾಟಕ ಪ್ರತಿವರ್ಷ ಅಂದಾಜು 2,20,000 ಕೋಟಿ ರೂಪಾಯಿಯಷ್ಟು ತೆರಿಗೆ-ಸುಂಕ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಅದರಲ್ಲಿ ಹಣಕಾಸು ಆಯೋಗದ ಶಿಫಾರಸಿನ ಸೂತ್ರದಂತೆ ಆ ತೆರಿಗೆ ಹಣದಲ್ಲಿ ಶೇಕಡಾ 42ರಷ್ಟು ಹಣವನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಹಿಂದಿರುಗಿ ಕೊಡಬೇಕು. ಆದರೆ ಬಿಜೆಪಿ ಆಡಳಿತದ ಕಾಲದಲ್ಲಿ ನಮಗೆಂದೂ ಶೇಕಡಾ 42ರಷ್ಟು ಪಾಲು ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯುಪಿಎ ಆಡಳಿತದ ಕಾಲದಲ್ಲಿ (2010/11- 2013/14) ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರ ತೆರಿಗೆಗಳ ಪಾಲು ನಿಗದಿಪಡಿಸಿದ್ದು ರೂ.45, 713 ಕೋಟಿ, ನಾವು ಪಡೆದದ್ದು ರೂ.47,036 ಕೋಟಿ. ಇದು ನಿಗದಿಪಡಿಸಿದ್ದಕ್ಕಿಂತ ರೂ.1.323 ಕೋಟಿ (ಶೇಕಡಾ 2.9ರಷ್ಟು) ಹೆಚ್ಚು. ಬಿಜೆಪಿ ಆಡಳಿತದ ಕಾಲದಲ್ಲಿ (2014-15 2019-20) 13 ಮತ್ತು 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.2,03,039 ಕೋಟಿ, ಸಿಕ್ಕಿದ್ದು ಕೇವಲ ರೂ.1,65 963 ಕೋಟಿ ರೂಪಾಯಿ ಮಾತ್ರ, ಅಂದರೆ ರೂ.48,768 ಕೋಟಿ (ಶೇಕಡಾ 18.2ರಷ್ಟು) ಕಡಿಮೆ ಎಂದು ಅವರು ಅಂಕಿಅಂಶ ಸಮೇತ ವಿವರಿಸಿದ್ದಾರೆ.
2019-20ರ ವರ್ಷಕ್ಕೆ ಕರ್ನಾಟಕಕ್ಕೆ ಹಣಕಾಸು ಆಯೋಗ ನಿಗದಿಪಡಿಸಿದ್ದ ತೆರಿಗೆ ಪಾಲು ರೂ.48, 768 ಕೋಟಿ, ನಮಗೆ ಸಿಕ್ಕಿರುವುದು ರೂ.30.919 ಕೋಟಿ ಮಾತ್ರ. ಇದರ ಜೊತೆಗೆ ಹತ್ತು ವರ್ಷಗಳ ಹಿಂದಿನ ಮತ್ತು ಈ ಹಣಕಾಸು ವರ್ಷದ ಕೇಂದ್ರ ಸರ್ಕಾರದ ಬಜೆಟ್ ಗಾತ್ರದಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಬಜೆಟ್ ಪ್ರಕಾರ 2010-21ನೇ ಹಣಕಾಸು ವರ್ಷದಲ್ಲಿ ನಿರೀಕ್ಷಿತ ತೆರಿಗೆ ಪಾಲು ರೂ.28,591 ಕೋಟಿ. ನನ್ನ ಪ್ರಕಾರ ಪ್ರಸಕ್ತ ವರ್ಷ ಮೊತ್ತ ರೂ.15,017 ಕೋಟಿಗೆ ಇಳಿದರೂ ಅಚ್ಚರಿ ಇಲ್ಲ. ಹೀಗಾದರೆ ಇದು 2019-20ರಲ್ಲಿ ನಿರೀಕ್ಷೆಗಿಂತ ರೂ.33,751 ಕೋಟಿ ಇಲ್ಲವೇ ರಾಜ್ಯ ಬಜೆಟ್ ಅಂದಾಜಿಗಿಂತ ರೂ.24 789ರಷ್ಟು ಕಡಿಮೆಯಾಗುತ್ತದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಜಿಎಸ್ ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಜಿಎಸ್ ಟಿ ಪರಿಹಾರದಲ್ಲಿ ಅಂದಾಜು 25ರಿಂದ 27 ಸಾವಿರ ಕೋಟಿ ಖೋತಾ ಆಗಬಹುದು. ಕೇಂದ್ರ ಸರ್ಕಾರ ಇತ್ತೀಚೆಗೆ 18-19,000 ಕೋಟಿಯಷ್ಟೇ ಪರಿಹಾರ ನೀಡುವುದಾಗಿ ಹೇಳಿತ್ತು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ ಅನುದಾನ ರೂ.31,570 ಕೋಟಿಗಳಷ್ಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಈಗಿನ ಲೆಕ್ಕಾಚಾರದ ಪ್ರಕಾರ ಇದು ರೂ.17,372 ಕೋಟಿ ಗಳಷ್ಟಾಗಬಹುದು. ಇದರಿಂದ ರೂ.14,198 ಕೋಟಿ ಖೋತಾ ಆಗಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಗೆ ಇದು ಮಾರಕ ಹೊಡೆತ ಎಂದು ಅವರು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಕಳೆದ ವರ್ಷಕ್ಕಿಂತ ಸುಮಾರು 50,000 ಕೋಟಿಯಷ್ಟು ಕಡಿಮೆ ಅನುದಾನ ಪಡೆಯಬಹುದು, ಇದನ್ನು ಆಧರಿಸಿ ಪ್ರಸಕ್ತ ಹಣಕಾಸು ವರ್ಷದ ಆದಾಯ ರೂ.1,80,217 ಕೋಟಿ ಗಳಾಗಬಹುದೆಂದು ರಾಜ್ಯ ಬಜೆಟ್ ನಲ್ಲಿ ನಿರೀಕ್ಷಿಸಲಾಗಿತ್ತು. ಕೇಂದ್ರ ಅನುದಾನದ ಕಡಿತದಿಂದಾಗಿ ಇದು ರೂ.1,14,758 ಕೋಟಿಗೆ ಇಳಿಯುವ ನಿರೀಕ್ಷೆ ಇದೆ.
ದಶಕಗಳಿಂದ ನಮ್ಮ ಒಟ್ಟು ಸಾಲ ಸುಮಾರು ರೂ.3.2ಲಕ್ಷ ಕೋಟಿಗಳೆಂದು ಅಂದಾಜು ಮಾಡಲಾಗಿದೆ. ಆದರೆ ಈಗಿನ ಒಂದೇ ವರ್ಷದಲ್ಲಿ ಸುಮಾರು ರೂ.90,000 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಕರ್ನಾಟಕವನ್ನು ಶಾಶ್ವತ ಸಾಲಗಾರ ರಾಜ್ಯವನ್ನಾಗಿ ಮಾಡಲು ಹೊರಟಿದೆ.
ಕೇಂದ್ರದಿಂದ ಸಿಗಬೇಕಾಗಿರುವ ತೆರಿಗೆ ಪಾಲು ಮತ್ತು ಅನುದಾನದ ಖೋತಾದಿಂದಾಗಿ ಆರ್ಥಿಕ ನಷ್ಟಕ್ಕೀಡಾಗಿರುವ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ರೂ.5,495 ಕೋಟಿ ನೀಡಬೇಕೆಂದು ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಈ ಅನುದಾನದ ನೆರವಿಗೂ ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಈಗಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಡ್ಡಗಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಈ ರೀತಿ ತಿರುಚಿದ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಆರೋಪಗಳನ್ನು ಮಾಡುವ ಮೊದಲು ಕೇಂದ್ರ ಹೋಮ್ ಮಿನಿಸ್ಟರ್ ಅಮಿತ್ ಶಾ ಅವರು ಮತ್ತೊಮ್ಮೆ ತಮ್ಮ ಹೋಂವರ್ಕ್ ಸರಿಯಾಗಿ ಮಾಡಿಕೊಂಡು ಬರಬೇಕೆಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

Join Whatsapp
Exit mobile version