ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಿನಾಮೆ ನೀಡುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ‘ಸಂವಿಧಾನ ಸಂರಕ್ಷಣಾ ಜಾಥಾ ನಡೆಯಿತು.
ಈ ವೇಳೆ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜೀನಾಮೆಗೆ ಒತ್ತಾಯಿಸಿದರು.
ಬೆಳಗ್ಗೆ ನಗರದ ಅಂಬೇಡ್ಕರ್ ವೃತ್ತದಿಂದ (ಹಳೆ ಜ್ಯೋತಿ ಸರ್ಕಲ್) ಮಿನಿ ವಿಧಾನಸೌಧದ ವರೆಗೆ ‘ಸಂವಿಧಾನ ಸಂರಕ್ಷಣಾ ಜಾಥಾ’ನಡೆದು ಬಳಿಕ ಪ್ರತಿಭಟನಾ ಸಭೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ‘ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ವಂಚಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಮೋದಿಯವರು ಸಂವಿಧಾನದ ಪುಸ್ತಕ ಮುಂದಿಟ್ಟು ನಾಟಕ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡುತ್ತಿದೆ.ಜೈ ಗಾಂಧಿ, ಜೈ ಭೀಮ್ , ಜೈ ಸಂವಿಧಾನ ನಮ್ಮ ಧೈಯವಾಗಿದೆ ಎಂದು ರೈ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಮಾಜಿ ಶಾಸಕ ಜೆ.ಆರ್ ಲೋಬೊ, ಮಾಜಿ ಮೇಯರ್ ಗಳಾದ ಶಶೀಧರ ಹೆಗ್ಡೆ ಹಾಗೂ ಕೆ.ಅಶ್ರಫ್, ಕಾಂಗ್ರೆಸ್ ನಾಯಕರಾದ ಪದ್ಮರಾಜ್ ಆರ್. ಪೂಜಾರಿ, ಮಿಥುನ್ ರೈ, ಅನಿಲ್ ಕುಮಾರ್, ಸುಧೀರ್ ಕುಮಾರ್, ಶಾಲೆಟ್ ಪಿಂಟೊ, ಇನಾಯತ್ ಅಲಿ, ಎಂಜಿ ಹೆಗಡೆ, ಲುಕ್ಮಾನ್ ಬಂಟ್ವಾಳ, ಬಶೀರ್ ಬೈಕಂಪಾಡಿ, ಕೆ.ಕೆ.ಶಾಹುಲ್ ಹಮೀದ್, ಸುಹಾನ್ ಆಳ್ವ ಮತ್ತಿತರರು ಭಾಗವಹಿಸಿದ್ದರು.