ಕೋವಿಡ್-19 ಲಸಿಕೆ ಬಗ್ಗೆ ಜನರಲ್ಲಿರುವ ಸಂಶಯಗಳನ್ನು, ತಪ್ಪು ಕಲ್ಪನೆಗಳನ್ನು ನಿವಾರಿಸಲು ಮೊದಲು ಪ್ರಧಾನಿ ನರೇಂದ್ರ ಮೋದಿ ಸ್ವಯಂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವಂಚಿತ್ ಬಹುಜನ ಅಘಾಡಿ-ವಿಬಿಎ ಮುಖಂಡ ಪ್ರಕಾಶ್ ಅಂಬೇಡ್ಕರ್ ಆಗ್ರಹಿಸಿದ್ದಾರೆ.
ಔರಂಗಾಬಾದ್ ನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ (ಉದ್ಧವ್ ಠಾಕ್ರೆ) ಮೊದಲು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ಬಗ್ಗೆ ಜನರಲ್ಲಿರುವ ಸಂಶಯ, ಆತಂಕ ದೂರ ಮಾಡಬೇಕು. ಅವರು ಲಸಿಕೆ ಹಾಕಿಸಿಕೊಂಡರೆ ತಾವು ಕೂಡ ಲಸಿಕೆ ಹಾಕಿಸಿಕೊಳ್ಳಲು ಸಿದ್ಧವಿರುವುದಾಗಿ ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಈ ತಿಂಗಳ 27 ರಂದು ಮಹಾರಾಷ್ಟ್ರದಾದ್ಯಂತ ಪ್ರತಿಭಟನೆ, ಚಳವಳಿ ನಡೆಸಲಾಗುವುದು. ಇದನ್ನು ವಂಚಿತ್ ಬಹುಜನ ಅಘಾಡಿಯ ಮುಸ್ಲಿಂ ಸ್ವಯಂಸೇವಕರು ಆಯೋಜಿಸಲಿದ್ದಾರೆ ಎಂದರು.
ಶಾಹೀನ್ ಬಾಗ್ ಪ್ರತಿಭಟನೆ ಸಂದರ್ಭದಲ್ಲಿ ಸಿಖ್ ಸಮುದಾಯದವರು ಬೆಂಬಲವಾಗಿ ನಿಂತಿದ್ದರು. ಈಗ ಮುಸ್ಲಿಮರು ರೈತರ ಪ್ರತಿಭಟನೆಯನ್ನು ಬೆಂಬಲಿಸಲಿದ್ದಾರೆ. ಈ ಆಂದೋಲನವನ್ನು ‘ಕಿಸಾನ್ ಬಾಗ್’ ಎಂಬ ಹೆಸರಿನಿಂದ ಕರೆಯಲಾಗುವುದು ಅವರು ಹೇಳಿದರು.
ಕಾಂಗ್ರೆಸ್, ಸಿಪಿಐ, ಸಿಪಿಎಂ ಸೇರಿದಂತೆ ವಿರೋಧ ಪಕ್ಷಗಳು ರೈತರ ಪರವಾಗಿ ನಿಲ್ಲುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ಮಾತ್ರ ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಉಳಿದವರು ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.