ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಝ್ ನ ಕೊಲೆ ಯತ್ನ ನಡೆದಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ನವಾಝ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳ 2ನೇ ಬ್ಲಾಕ್ ಬಳಿ ಬುಧವಾರ ಸಂಜೆ ಈ ದಾಳಿ ನಡೆದಿದೆ. ದಾಳಿಯಿಂದ ಗಂಭೀರ ಗಾಯಗೊಂಡ ಪಿಂಕಿ ನವಾಝ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ಬಂದ ಆರು ಜನರ ತಂಡದಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ. ಶಾಕಿಬ್ ಅಲಿಯಾಸ್ ಶಾಬು ಎಂಬಾತನ ಗ್ಯಾಂಗ್ ನಿಂದ ಈ ಕೊಲೆ ಯತ್ನ ನಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ಶಾಬು ಗ್ಯಾಂಗ್ ಜೊತೆ ಪಿಂಕಿ ನವಾಜ್ ಮನಸ್ತಾಪ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿದ ತಕ್ಷಣ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.