Home ಟಾಪ್ ಸುದ್ದಿಗಳು ಮಂಗಳೂರು: ಕರಾವಳಿ ಉತ್ಸವದಲ್ಲಿ ಆಕರ್ಷಿಸುತ್ತಿರುವ ಅರಣ್ಯ..!

ಮಂಗಳೂರು: ಕರಾವಳಿ ಉತ್ಸವದಲ್ಲಿ ಆಕರ್ಷಿಸುತ್ತಿರುವ ಅರಣ್ಯ..!

ಮಂಗಳೂರು: ಡಿಸೆಂಬರ್ 21 ರಿಂದ ನಗರದಲ್ಲಿ  ಆರಂಭವಾಗಿರುವ ಕರಾವಳಿ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಉತ್ಸವದ ಅಂಗವಾಗಿ ಕೃತಕವಾಗಿ ಸೃಷ್ಟಿ ಮಾಡಿರುವ ಕಾಡು ವೀಕ್ಷಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿವೆ. ಕಾಡಿನಲ್ಲಿರುವಂತೆ ವಿವಿಧ ಮರ ಗಿಡಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ನೀರು ಹರಿಯುವ ಶಬ್ಧ ವೀಕ್ಷಕರ ಕಿವಿಗೆ ಮುದ ನೀಡುತ್ತಿವೆ.

ಕಾಡಿನ ಒಳಗೆ ಕಾಲಿಡುವ ಆರಂಭದಲ್ಲೇ ಹುಲಿಯ ಬಾಯೊಳಗೆ ಹೋದಂತಹ ಥ್ರಿಲ್. ಋಷಿಮುನಿಗಳು ತಪಸ್ಸಿನಲ್ಲಿ ಮಗ್ನರಾಗಿರುವ ದೃಶ್ಯವನ್ನು ಕಾಣಬಹುದು. ವಿವಿಧ ಜಿಲ್ಲೆಯ ಬೆಟ್ಟ ಗುಡ್ಡಗಳ ರಚನೆಗಳು ಹಾಗೂ ಚಾರಣದ ದೃಶ್ಯಗಳು ನೋಡುಗರಿಗೆ ಪ್ರಕೃತಿರಮಣೀಯವಾದ ಅನುಭವವನ್ನು ನೀಡುತ್ತಿವೆ.

ಅರಣ್ಯ ಇಲಾಖೆಯ ಕಚೇರಿ ಹಾಗೂ ಅಭಯಾರಣ್ಯಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮರಗಳ ಮೇಲೆ ನಿರ್ಮಿಸುವಂತಹ ವೀಕ್ಷಣಾ ಗೋಪುರದ ದೃಶ್ಯಾವಳಿ ಇದೆ. ಹುಲಿ, ಆನೆ, ಚಿರತೆ, ಜಿಂಕೆ, ಮೊಸಳೆ, ಆಮೆ, ಮತ್ತಿತರ ವನ್ಯಜೀವಿ ಪ್ರಬೇಧಗಳ ಘೀಳಿಡುವ ಶಬ್ಧ ವೀಕ್ಷಕರಿಗೆ ಮುದ ನೀಡುತ್ತಿವೆ. ಹಚ್ಚ ಹಸಿರಾದ ಮರ ಮತ್ತು ಹೂ ಗಿಡಗಳ ಮಧ್ಯೆ ನಡೆದುಕೊಂಡು ಹೋಗುವಾಗ ಕಾಡಿನ ಮಧ್ಯೆ ಹೋಗುವ ಸುಂದರ ಅನುಭವ ವೀಕ್ಷರಿಗೆ ಆಗುತ್ತಿವೆ.

ಇನ್ನೊಂದೆಡೆ ಕಾಡಿನ ತೀರದಲ್ಲಿ ಹಳ್ಳಿ ಸೊಗಡಿನ ದೃಶ್ಯ ವೀಕ್ಷಕರ ಗಮನ ಸೆಳೆಯುತ್ತಿವೆ. ಸುಂದರವಾಗಿ ನಿರ್ಮಿಸಿದ ಹಳ್ಳಿಮನೆ ದೃಶ್ಯ ನೋಡುಗರಿಗೆ ಖುಷಿ ನೀಡುತ್ತಿವೆ. ರೈತನು ಗದ್ದೆಯಲ್ಲಿ ಉಳುಮೆ ಮಾಡುವ ದೃಶ್ಯವನ್ನು ಕಾಣಬಹುದು. ಮರ-ಗಿಡಗಳಿಂದ ಆವೃತವಾದ ಪ್ರಾಕೃತಿಕ ದೃಶ್ಯಗಳು ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ನೋಡುಗರನ್ನು ಬೆರಗು ಮೂಡಿಸುತ್ತಿದೆ.

ಒಟ್ಟಾರೆಯಾಗಿ ನಗರ ಪ್ರದೇಶದ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ಜನಸಾಮಾನ್ಯರು ಈಗ ಕರಾವಳಿ ಉತ್ಸವದಲ್ಲಿ ಮೈನವಿರೇಳಿಸುವ ಕಾಡಿಗೆ ಭೇಟಿ ನೀಡಿ ಪ್ರಾಕೃತಿಕ ಅನುಭವವನ್ನು ಪಡೆಯುವ ಮೂಲಕ ದಿನನಿತ್ಯದ ಒತ್ತಡಯುತ ದಿನಚರಿಗೆ ವಿರಾಮ ನೀಡಬಹುದು.

Join Whatsapp
Exit mobile version