Home ಟಾಪ್ ಸುದ್ದಿಗಳು ನಿರ್ಬಂಧಿತ ಸ್ಥಳದಲ್ಲಿ ವೀಡಿಯೋ ಚಿತ್ರೀಕರಿಸಿದ ವಿವಾದಾತ್ಮಕ ಯೂಟ್ಯೂಬರ್ ಬಂಧನ

ನಿರ್ಬಂಧಿತ ಸ್ಥಳದಲ್ಲಿ ವೀಡಿಯೋ ಚಿತ್ರೀಕರಿಸಿದ ವಿವಾದಾತ್ಮಕ ಯೂಟ್ಯೂಬರ್ ಬಂಧನ

ಮಥುರಾ: ತನ್ನ ನಾಯಿಯನ್ನು ಬಲೂನ್ ಗೆ ಕಟ್ಟಿ ಗಾಳಿಯಲ್ಲಿ ಹಾರಾಡಿಸಿದ ಪ್ರಕರಣವೊಂದರಲ್ಲಿ ಬಂಧನವಾಗಿದ್ದ ಗೌರವ್ ಶರ್ಮಾ ಎಂಬಾತನನ್ನು ನಿರ್ಬಂಧಿತ ಸ್ಥಳದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಒಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಗೌರವ್ ಝೋನ್ ಎಂಬ ಯೂಟ್ಯೂಬ್ ಚಾನೆಲ್ ನ ನಿರ್ವಾಹಕನಾಗಿರುವ ಗೌರವ್ ಶರ್ಮಾ ಎಂಬಾತನನ್ನು ದೆಹಲಿಯ ನಿವಾಸದಿಂದ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ನಿಧಿವನ್ ರಾಜ್ ನ ಅರ್ಚಕ ರೋಹಿತ್ ಗೋಸ್ವಾಮಿ ನೀಡಿದ ದೂರಿನನ್ವಯ ವೃಂದಾವನ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295 ಎ ಮತ್ತು ಐಟಿ ಕಾಯ್ದೆ 66 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಾರದ ಹಿಂದೆ ವೃಂದಾವನದಲ್ಲಿ ರಾತ್ರಿ ವೇಳೆಯಲ್ಲಿ ಚಿತ್ರೀಕರಣಕ್ಕೆ ನಿರ್ಬಂಧಿಸಲಾದ ಪ್ರಮುಖ ತಾಣವಾದ ನಿಧಿವನ್ ರಾಜ್ ಒಳ ಆವರಣದಲ್ಲಿ ಚಿತ್ರೀಕರಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಧಿವನ್ ರಾಜ್ ನಲ್ಲಿ ರಾಧಾ ಮತ್ತು ಭಗವಾನ್ ಕೃಷ್ಣ ಪರಸ್ಪರ ಸಂಧಿಸುವ ಪವಿತ್ರ ಸ್ಥಳ ಎಂಬ ನಂಬಿಕೆ ಆಧಾರದಲ್ಲಿ, ಆ ಸ್ಥಳಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿಸಲಾಗುವುದಿಲ್ಲ.

ಸದ್ಯ ಶರ್ಮಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತರನ್ನು ಕೂಡ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ಘಟನೆಯ ಕುರಿತು ವಿಚಾರಣೆ ನಡೆಸಿದ ಪೊಲೀಸರು, ಸೋದರಸಂಬಂಧಿ ಪ್ರಶಾಂತ್ ಮತ್ತು ಸ್ನೇಹಿತರಾದ ಮೋಹಿತ್, ಅಭಿಷೇಕ್ ಜೊತೆ ಪವಿತ್ರ ಸ್ಥಳದಲ್ಲಿ ವೀಡಿಯೋ ಚಿತ್ರೀಕರಿಸಿವುದನ್ನು ಶರ್ಮಾ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವೀಡಿಯೋವನ್ನು ಶರ್ಮಾ ನವೆಂಬರ್ 9 ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದನು. ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ವೀಡಿಯೋವನ್ನು ಅಳಿಸಿ ಹಾಕಲಾಗಿತ್ತು.

Join Whatsapp
Exit mobile version