Home ಕರಾವಳಿ ಕುರ್ನಾಡು ಮಸೀದಿ ಬಳಿ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನ: ಮೂವರು ವಶಕ್ಕೆ

ಕುರ್ನಾಡು ಮಸೀದಿ ಬಳಿ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನ: ಮೂವರು ವಶಕ್ಕೆ

ಮಂಗಳೂರು : ಕುರ್ನಾಡುವಿನ ಸುಬ್ಬಗುಳಿ ತಾಜುಲ್ ಉಲಮಾ ಜುಮಾ ಮಸೀದಿ ಬಳಿ ಮೂವರು ಯುವಕರು ಜೈಶ್ರೀರಾಮ್ ಘೋಷಣೆ ಕೂಗಿ ಮಸೀದಿಗೆ ಹಾನಿಗೊಳಿಸಲು ಯತ್ನಿಸಿದ ಮೂವರು ದುಷ್ಕರ್ಮಿಗಳನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.


ರವಿವಾರ ತಡರಾತ್ರಿ ಕುರ್ನಾಡು ಪರಿಸರದ ಮೂವರು ಯುವಕರು ಮಸೀದಿ ಬಳಿ ಘೋಷಣೆಗಳನ್ನು ಕೂಗಿ, ಮಸೀದಿಗೆ ಹಾನಿಗೊಳಿಸಲು ಯತ್ನಿಸಿದ್ದಾರೆ ಎಂದು ಕೊಣಾಜೆ ಪೊಲೀಸ್ ಠಾಣೆಗೆ ಮಸೀದಿಯ ಕಮಿಟಿ ದೂರು ನೀಡಿದೆ.ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಸರದಲ್ಲಿ ಹಿಂದೂ ಮುಸ್ಲಿಂ ಜನರು ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದು ಇದನ್ನು ಸಹಿಸದ ಕೆಲವರು ಇಂತಹ ಹೀನ ಕೃತ್ಯ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಮಸೀದಿಯ ಕಾರ್ಯದರ್ಶಿ ಲತೀಫ್ ತಿಳಿಸಿದ್ದಾರೆ.


”ಕೊಣಾಜೆಯಲ್ಲಿ ಮಸೀದಿಯೊಂದರ ಬಳಿ ಮೂವರು ವ್ಯಕ್ತಿಗಳು ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಅವರನ್ನು ತಡೆದು ಹಿಡಿಯಲು ಪ್ರಯತ್ನಿಸಿದ್ದಾರೆ. ಮೂವರನ್ನೂ ವಶಕ್ಕೆ ಪಡೆಯಲಾಗಿದೆ. ಅವರ ಹಿನ್ನೆಲೆ ಪರಿಶೀಲಿಸುತ್ತಿದ್ದು ಎಫ್ ಐ ಆರ್ ಇನ್ನಷ್ಟೇ ದಾಖಲಾಗಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಸಂಘೀ ಕಿಡಿಗೇಡಿಗಳ ಶಾಂತಿ ಕದಡುವ ಕೃತ್ಯಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ
ಸಂಘಪರಿವಾರದ ದುಷ್ಕರ್ಮಿಗಳು ಬೋಳಿಯಾರ್ ತಾಜುಲ್ ಉಲಮಾ ಜುಮಾ ಮಸೀದಿಗೆ ಹೊಂಚು ಹಾಕಿ ದಾಳಿ ನಡೆಸಲು ಯತ್ನಿಸಿದ ದುಷ್ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ವಿಟ್ಲ ವಲಯ ಕಾರ್ಯದರ್ಶಿ ಹನೀಫ್ ಬೋಳಿಯಾರ್ ಖಂಡಿಸಿದ್ದಾರೆ.


ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ದುಷ್ಕರ್ಮಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ನವೆಂಬರ್ 14ರ ರಾತ್ರಿ ಬೋಳಿಯಾರ್ ಸುಬ್ಬಗುಳಿ ತಾಜುಲ್ ಉಲಮಾ ಜುಮಾ ಮಸೀದಿ ಗೇಟ್ ಸಮೀಪ ಈ ಕಿಡಿಗೇಡಿಗಳು ಮಾರಾಕಾಸ್ತ್ರ ಝಳಪಿಸಿ, ಜೈ ಶ್ರೀ ರಾಮ್ ಘೋಷಣೆ ಕೂಗಿ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ, ಈ ವೇಳೆ ಮಸೀದಿಗೆ ನುಗ್ಗಿ ದಾಳಿ ನಡೆಸಲು ಯತ್ನಿಸಿದಾಗ ನಾಗರಿಕರ ಸಮಯ ಪ್ರಜ್ಞೆಯಿಂದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತು ಕುರ್ನಾಡು ಫ್ರೆಂಡ್ಸ್ ಸರ್ಕಲ್ (ಕೆ ಎಫ್. ಸಿ ) ಕಚೇರಿಯಲ್ಲಿ ಅವಿತುಕೊಂಡಿದ್ದರು.


ತುರ್ತು ಕಾರ್ಯಾಚರಣೆ ನಡೆಸಿ, ದಾಳಿಗೆತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸರ ಕ್ರಮ ಸ್ವಾಗತಾರ್ಹ ಮತ್ತು ಸ್ಥಳೀಯರ ಸಮಯಪ್ರಜ್ಞೆ ಪ್ರಶಂಸಾರ್ಹ. ಸೌಹಾರ್ದದಿಂದಿರುವ ಬೋಳಿಯಾರ್ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸಿದ ಸಂಘಪರಿವಾರದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವಿತುಕೊಳ್ಳಲು ಸಹಕರಿಸಿದ ಕೆ.ಎಫ್.ಸಿ ಕಚೇರಿಯ ಅಧಿಕೃತರನ್ನು ವಿಚಾರಣೆಗೊಳಪಡಿಸಬೇಕು ಮತ್ತು ಈ ಘಟನೆಯ ದುರುದ್ದೇಶಪೂರಿತ ಸಂಚನ್ನು ಬಹಿರಂಗಪಡಿಸಬೇಕೆಂದು ಹನೀಫ್ ಬೋಳಿಯಾರ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version