Home ಟಾಪ್ ಸುದ್ದಿಗಳು ಮತದಾರ ಸ್ವಲ್ಪ ಎಡವಿದರೂ ಉತ್ತರ ಪ್ರದೇಶ ರಾಜ್ಯ ಕೇರಳ, ಪಶ್ಚಿಮ ಬಂಗಾಳವಾಗಲಿದೆ ಎಂದ ಆದಿತ್ಯನಾಥ್!

ಮತದಾರ ಸ್ವಲ್ಪ ಎಡವಿದರೂ ಉತ್ತರ ಪ್ರದೇಶ ರಾಜ್ಯ ಕೇರಳ, ಪಶ್ಚಿಮ ಬಂಗಾಳವಾಗಲಿದೆ ಎಂದ ಆದಿತ್ಯನಾಥ್!

►ಕೇರಳ ನಂಬರ್ ಒನ್ ರಾಜ್ಯ ಎಂದು ನೆಟ್ಟಿಗರಿಂದ ತಿರುಗೇಟು

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡುರಾತ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಮತದಾರರೇ, ಮತ ಹಾಕುವಲ್ಲಿ ನೀವು ಸ್ವಲ್ಪವೇ ಎಡವಿದರೂ ನಮ್ಮ ಉತ್ತರಪ್ರದೇಶವೂ ಕಾಶ್ಮೀರ, ಕೇರಳ, ಬಂಗಾಳದಂತೆ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

403 ವಿಧಾನಸಭೆ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ, ಮೊದಲ ಹಂತದ ಮತದಾನ ಬೆಳಿಗ್ಗಿನಿಂದಲೇ ಆರಂಭವಾಗಿದೆ.

ಎಲ್ಲಾ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಉತ್ತರ ಪ್ರದೇಶದಲ್ಲಿ ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳೂ ಸರ್ವ ಪ್ರಯತ್ನ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನಡುರಾತ್ರಿ ವಿಡಿಯೋ ಮೂಲಕ ರಾಜ್ಯದ ಜನತೆಗೆ ಸಂದೇಶವನ್ನು ನೀಡಿದ್ದಾರೆ.

 ‘ಮತದಾರರೇ ಗಮನಿಸಿ… ಇಂದು ಮೊದಲ ಹಂತದ ಮತದಾನ ನಡೆಯಲಿದೆ. ನೀವೇನಾದರೂ ಇಂದು ಮತ ಹಾಕುವಲ್ಲಿ ಸ್ವಲ್ಪವೇ ಎಡವಿದರೂ ನಮ್ಮ ಉತ್ತರ ಪ್ರದೇಶ ರಾಜ್ಯವೂ ಕೂಡ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತೆ ಆಗುತ್ತದೆ. ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದೇ ಎಲ್ಲರೂ ಹೇಳುವುದು ನಿಜವೇ. ಕೇಂದ್ರದಲ್ಲಿಯೂ ನಮ್ಮದೇ ಸರ್ಕಾರವಿದೆ, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಜನರಿಗೆ ಎಲ್ಲ ಅನುಕೂಲಗಳನ್ನೂ ಮಾಡಿಕೊಡಲು ಬದ್ಧತೆಯನ್ನು ಹೊಂದಿವೆ. ಕಳೆದ ಐದು ವರ್ಷಗಳಲ್ಲಿ ಜನರಿಗಾಗಿ ತುಂಬ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನೀವೇನಾದರೂ ತಪ್ಪು ಮತ ಚಲಾಯಿಸಿದರೆ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳದಂತಾಗಲಿದೆ ಎಂದು ಯೋಗಿ ಹೇಳಿದ್ದಾರೆ.

ಆದಿತ್ಯನಾಥ್ ಹೇಳಿಕೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಎಲ್ಲಾ ರಂಗಗಳಲ್ಲೂ ಕೊನೆಯ ಸ್ಥಾನದಲ್ಲಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ನಂ.1 ಸ್ಥಾನದಲ್ಲಿರುವ ಕೇರಳದ ಬಗ್ಗೆ ಎಚ್ಚರಿಕೆ ಕೊಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.

Join Whatsapp
Exit mobile version