Home ಟಾಪ್ ಸುದ್ದಿಗಳು ರಾಣಿ ಎಲಿಝಬೆತ್ ಗಾಗಿ ಉಮ್ರಾ ನಿರ್ವಹಿಸಲು ಬಂದ ಯೆಮನ್ ಪೌರನ ಬಂಧನ

ರಾಣಿ ಎಲಿಝಬೆತ್ ಗಾಗಿ ಉಮ್ರಾ ನಿರ್ವಹಿಸಲು ಬಂದ ಯೆಮನ್ ಪೌರನ ಬಂಧನ

ರಿಯಾದ್/ ಸೌದಿ ಅರೇಬಿಯ: ಇತ್ತೀಚೆಗೆ ನಿಧನರಾದ ಬ್ರಿಟನ್ ರಾಣಿ ಎರಡನೇ ಎಲಿಝಬೆತ್ ಪರವಾಗಿ ಉಮ್ರಾ ನಿರ್ವಹಿಸಲು ಬಂದಿದ್ದ ಎನ್ನಲಾದ ಯೆಮನ್ ಪೌರನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಯೆಮನ್ ಮೂಲದ ಪ್ರಜೆಯು ಮಕ್ಕಾದ ಮಸ್ಜಿದುಲ್ ಹರಂನಿಂದ ಸ್ವಯಂ ಚಿತ್ರೀಕರಿಸಿದ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದರಲ್ಲಿ ಆತ ಬ್ಯಾನರ್ ಒಂದನ್ನು ಹಿಡಿದಿದ್ದು, ಅದರಲ್ಲಿ “ಇದು ರಾಣಿ ಎಲಿಜಬೆತ್ II ರ ಆತ್ಮಕ್ಕಾಗಿ ನಿರ್ವಹಿಸುವ ಉಮ್ರಾ. ಅವರನ್ನು ಸಜ್ಜನರೊಂದಿಗೆ ಸ್ವರ್ಗದಲ್ಲಿ ಸ್ವೀಕರಿಸು ಎಂದು ನಾವು ದೇವರ ಬಳಿ ಪ್ರಾರ್ಥಿಸುತ್ತೇವೆ” ಎಂಬರ್ಥದಲ್ಲಿ ಬರೆಯಲಾಗಿತ್ತು.

ಈ ವೀಡಿಯೋ ಸೌದಿ ಅರೇಬಿಯದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದರು.

ಬ್ಯಾನರ್, ಘೋಷಣೆಗಳೊಂದಿಗೆ ಮಕ್ಕಾ ಪ್ರವೇಶಿಸುವುದಕ್ಕೆ ಅಲ್ಲಿನ ಆಡಳಿತ ನಿಷೇಧ ವಿಧಿಸಿದೆ. ಇದನ್ನು ಈ ವ್ಯಕ್ತಿಯು ಉಲ್ಲಂಘಿಸಿದ್ದ.

“ಮಸ್ಜಿದುಲ್ ಹರಂನಲ್ಲಿ ಬ್ಯಾನರ್ ಪ್ರದರ್ಶಿಸುವ ಮೂಲಕ ಉಮ್ರಾದ ನಿಯಮ ಮತ್ತು ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ವೀಡಿಯೋದಲ್ಲಿ ಕಾಣಿಸಿಕೊಂಡ ಯೆಮನ್ ಪ್ರಜೆಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ” ಎಂದು ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version