Home ಟಾಪ್ ಸುದ್ದಿಗಳು ಪೂಜಾ ಸ್ಥಳಗಳ ಕಾಯಿದೆ 1991 ರ ಕಟ್ಟುನಿಟ್ಟಾದ ಅನುಷ್ಠಾನವಾಗಬೇಕು: ಸಿಪಿಐಎಂ

ಪೂಜಾ ಸ್ಥಳಗಳ ಕಾಯಿದೆ 1991 ರ ಕಟ್ಟುನಿಟ್ಟಾದ ಅನುಷ್ಠಾನವಾಗಬೇಕು: ಸಿಪಿಐಎಂ

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನಿರ್ಧಾರ ಪೂಜಾ ಸ್ಥಳಗಳ ಕಾಯಿದೆ, 1991ರ ಹಿಂದಿನ ಗುರಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ.

ನ್ಯಾಯಾಂಗದ ಕೆಲವು ವಿಭಾಗಗಳು ಮಾಡುವ ಕಾನೂನಿನ ತಪ್ಪು ವ್ಯಾಖ್ಯಾನಗಳು ಯಾವ ಗಂಭೀರ ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಕಾನೂನನ್ನು ತರಲಾಗಿದೆಯೋ ಅವೇ ಸಂಭವಿಸುವುದಕ್ಕೆ ಕಾರಣವಾಗುತ್ತವೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಆಡಳಿತ ಪಕ್ಷವು ಇತಿಹಾಸದ ಒಂದು ವಿಕೃತ ವ್ಯಾಖ್ಯಾನ ಕೊಡಲೇಬೇಕೆಂದು ನಿರ್ಧರಿಸಿದೆ ಎಂಬುದು ರಹಸ್ಯವೇನಲ್ಲ. ಇಂದಿನ ಮಸೀದಿಗಳನ್ನು ದೇವಾಲಯಗಳನ್ನು ಧ್ವಂಸಗೊಳಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗಿದೆ ಎಂಬ ದಾವೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮುವಾದಿ ಕಾರ್ಯಸೂಚಿಗೆ ಬಳಸಿಕೊಳ್ಳುವ ಬಹಳ ದೀರ್ಘಕಾಲದ ವಿಧಾನವಾಗಿದೆ ಎಂದು ಸಿಪಿಐಎಂ ಪೊಲಿಟ್‍ ಬ್ಯುರೊ ನೆನಪಿಸಿದೆ.

1991 ರ ಕಾನೂನನ್ನು ತಂದಿರುವುದು ಕೋಮು ಸೌಹಾರ್ದತೆಯ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿಯುವುದಕ್ಕಾಗಿ ಮತ್ತು ಮಥುರಾ ಮತ್ತು ವಾರಣಾಸಿಯಂತಹ ಹಲವಾರು ದುರುದ್ದೇಶ ಪ್ರೇರಿತ ಅರ್ಜಿಗಳನ್ನು ತಡೆಯುವುದಕ್ಕಾಗಿ ಎಂದಿರುವ ಸಿಪಿಐಎಂ ಪೊಲಿಟ್‍ ಬ್ಯುರೊ, 1991ರ ಕಾನೂನಿನ ಹಿಂದಿದ್ದ ಭಾವನೆ ಮತ್ತು ಅದರ ಆಶಯದ ಆಧಾರದಲ್ಲಿ ಅದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.

Join Whatsapp
Exit mobile version