Home ಟಾಪ್ ಸುದ್ದಿಗಳು ರಾಷ್ಟ್ರಪತಿ ಚುನಾವಣೆಯ ಸ್ಪರ್ಧೆಗಾಗಿ ಟಿಎಂಸಿಗೆ ರಾಜೀನಾಮೆ ನೀಡಿದ ಯಶವಂತ ಸಿನ್ಹಾ

ರಾಷ್ಟ್ರಪತಿ ಚುನಾವಣೆಯ ಸ್ಪರ್ಧೆಗಾಗಿ ಟಿಎಂಸಿಗೆ ರಾಜೀನಾಮೆ ನೀಡಿದ ಯಶವಂತ ಸಿನ್ಹಾ

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಲುವಾಗಿ ಕೇಂದ್ರ ಮಾಜಿ ಸಚಿವ ಯಶವಂತ ಸಿನ್ಹಾ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕಾದರೆ ಪಕ್ಷಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮತ್ತು ಎಡಪಕ್ಷಗಳಿಂದ ಒತ್ತಡ ಬಂದ ಕಾರಣ ಯಶವಂತ ಸಿನ್ಹಾ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ.

ಟ್ವೀಟ್ ಮಾಡಿರುವ ಅವರು, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಪಕ್ಷದಲ್ಲಿ ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ಅಭಾರಿಯಾಗಿದ್ದೇನೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ್ತು ಪ್ರತಿಪಕ್ಷಗಳ ಏಕತೆಗಾಗಿ ನಾನು ಪಕ್ಷ ತ್ಯಜಿಸಬೇಕಾದ ಅನಿವಾರ್ಯತೆ ಎದುರಾಗಿದೆ. ನನ್ನ ನಿರ್ಧಾರವನ್ನು ಅವರು ಗೌರವಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಲು ಮಹಾತ್ಮಗಾಂಧಿ ಮೊಮ್ಮಗ ಹಾಗೂ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಎನ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್, ಫಾರೂಕ್ ಅಬ್ದುಲ್ಲಾ ಸೇರಿದಂತೆ ಹಲವರು ನಿರಾಕರಿಸಿದ್ದರು. ಇದರಿಂದಾಗಿ ವಿರೋಧ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿವೆ.

Join Whatsapp
Exit mobile version