ಚಿಕ್ಕಮಗಳೂರು: ಆನೆ ದಾಳಿಯಿಂದ ಕಾರ್ಮಿಕ ಸಾವನ್ನಪ್ಪಿದ್ದನ್ನು ವಿರೋಧಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ತೋಟದ ಕೆಲಸ ಮುಗಿಸಿ ಬರುವಾಗ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ 45 ವರ್ಷದ ಅರ್ಜುನ್ ಮೇಲೆ ಆನೆ ದಾಳಿ ಮಾಡಿತ್ತು. ಆನೆ ದಾಳಿಯಿಂದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇಂದು ಮೃತ ಅರ್ಜುನ್ ಅವರ ಮರಣೋತ್ತರ ಪರೀಕ್ಷೆಯ ನಂತರ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿ ಮೃತದೇಹವನ್ನ ಅರಣ್ಯ ಇಲಾಖೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಒಂದು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶಗೊಂಡ ನೂರಾರು ಪ್ರತಿಭಟನಾಕಾರರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಅರಣ್ಯ ಇಲಾಖೆಯ ಗೇಟ್ ಮೇಲೆ ಹತ್ತಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಅರಣ್ಯ ಇಲಾಖೆಯವರಲ್ಲಿ ಆನೆ ಇದೆ ಎಂದಾಗ ಬಂದು ಪಟಾಕಿ ಹೊಡೆಯುವುದನ್ನ ಬಿಟ್ಟು ಬೇರೇನೂ ಮಾಡುವುದಿಲ್ಲ. ಅರಣ್ಯ ಇಲಾಖೆಗೆ ಆನೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ. ಅರಣ್ಯ ಇಲಾಖೆಗೆ ಇನ್ನೆಷ್ಟು ಬಲಿ ಬೇಕು ಎಂದು ಸ್ಥಳಿಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.