ಕೊಡಗು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನಡೆಯ ವಿರುದ್ಧ ಮಡಿಕೇರಿಯಲ್ಲಿ ಸೋಮವಾರ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಡಿಕೇರಿ ಎಸ್ ಡಿಪಿಐ ನಗರ ಸಮಿತಿ ಉಪಾಧ್ಯಕ್ಷೆ ತನುಜಾವತಿ, ಕೌನ್ಸಿಲರ್ ಮೇರಿ ವೇಗಸ್ , ಮುಖಂಡರಾದ ಝಾಕಿಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಝಾಕಿಯ, ಭಾರತ ವೈವಿಧ್ಯತೆಯಲ್ಲಿ ಏಕತೆಯ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮದವರಿಗೆ ಅವರ ಧರ್ಮವನ್ನು ಅನುಸರಿಸುವ, ಆಚರಿಸುವ ಅಧಿಕಾರವನ್ನು ಸಂವಿಧಾನ ನೀಡಿದೆ. ಇದನ್ನು ಯಾರು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾವು ಫ್ಯಾಶನ್ ಗಾಗಿಯೋ, ಸ್ಪರ್ಧೆಗಾಗಿಯೋ ಹಿಜಾಬ್ ಧರಿಸುತ್ತಿಲ್ಲ. 1400 ವರ್ಷಗಳಿಂದಲೂ ಮುಸ್ಲಿಮರು ಶಿರವಸ್ತ್ರ ಧರಿಸುತ್ತಿದ್ದಾರೆ. ಇದನ್ನು ಕಿತ್ತುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.
ಇಲ್ಲಿನ ಸಂಸದರು ನೀಡಿರುವ ಹೇಳಿಕೆ ಅತ್ಯಂತ ನೀಚತನದ್ದು. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕಾಪ್ರಹಾರ ನಡೆಸಿದರು.
ವಿದ್ಯಾರ್ಥಿನಿ ಅನ್ಶಿಕಾ ಮಾತನಾಡಿ, ಹಿಜಾಬ್ ನಮ್ಮ ಹಕ್ಕು, ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಹಿಜಾಬ್ , ಬುರ್ಖಾ ಧರಿಸಿ ಕಾಲೇಜಿಗೆ ಬರಬೇಡಿ, ಮದ್ರಸಕ್ಕೆ ಹೋಗಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹಿಜಾಬ್ ಧರಿಸಿ ನಾವು ಎಲ್ಲಿಗೆ ಹೋಗಬೇಕು ಎಂಬುದರ ಬಗ್ಗೆ ನೀವು ತಲೆಬಿಸಿ ಮಾಡಬೇಡಿ, ನಮಗೆ ಗೊತ್ತಿಗೆ ನಾವು ಎಲ್ಲಿಗೆ ಹೋಗಬೇಕು ಎಂದು ತಿರುಗೇಟು ನೀಡಿದರು.
ಭಾರತ ಜಾತ್ಯತೀತ ರಾಷ್ಟ್ರ. ನಮ್ಮ ದೇಶದ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಇಲ್ಲಿ ಎಲ್ಲರೂ ಸಮಾನರು. ಇದುವರೆಗೆ ಇಲ್ಲದ ಶಿರವಸ್ತ್ರ ವಿವಾದ ಈಗ ಏಕಾಏಕಿ ಹೇಗೆ ಹುಟ್ಟುಕೊಂಡಿತು. ನಾವೇನು ಧರಿಸಬೇಕು ಎನ್ನುವುದನ್ನು ಪ್ರತಾಪ್ ಸಿಂಹ ಕಲಿಸಬೇಕಾಗಿಲ್ಲ, ಅದು ನಮಗೆ ಗೊತ್ತಿದೆ ಎಂದು ಹೇಳಿದರು.