Home ಟಾಪ್ ಸುದ್ದಿಗಳು ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ: ಸಿದ್ದರಾಮಯ್ಯ ಟೀಕೆ

ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ನರೇಂದ್ರ ಮೋದಿ ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಾಶ್ಮೀರದಲ್ಲಿ ಮಹಿಳೆಯರೆಲ್ಲರೂ ಸುರಕ್ಷಿತರಾಗಿದ್ದಾರೆಯೇ? ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲವೇ? ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ದೂರುದಾರರ ಬೆನ್ನು ಹತ್ತಿರುವ ಸರ್ಕಾರದ ದುರುದ್ದೇಶ ಅರ್ಥವಾಗದಷ್ಟು ದೇಶದ ಜನ ಮೂರ್ಖರಲ್ಲ ಬಿಜೆಪಿ, ನರೇಂದ್ರ ಮೋದಿ, ಅಮಿತ್ ಶಾ ಎಂದು ಕುಟುಕಿದ್ದಾರೆ.
ಉದ್ಯಮಿ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ರಾಹುಲ್ ಗಾಂಧಿ ಅವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ? ಕಳ್ಳರ ಮನಸ್ಸು ಹುಳ್ಳಗೆ. ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ-ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ. ಆರೋಪಿಗಳ ಪಟ್ಟಿ ಉದ್ದ ಇದೆ. ಅಮಿತ್ ಶಾ ನರೇಂದ್ರ ಮೋದಿ ಭಾರತ್ ಜೋಡೊ ಯಾತ್ರೆಯ ಯಶಸ್ಸು ಆಡಳಿತಾರೂಢ ಬಿಜೆಪಿ ಪಕ್ಷದ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು. ರಾಹುಲ್ ಗಾಂಧಿಯವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version