ವಿಜಯವಾಡ: ಗಂಡು ಮಗುವಿನ ಮೇಲಿನ ವ್ಯಾಮೋಹದಿಂದಾಗಿ ಕ್ರೂರಿ ತಾಯಿಯೊಬ್ಬಳು ನಾಲ್ಕು ವರ್ಷಗಳಲ್ಲಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಜನಿಸಿದ ಕೆಲ ದಿನಗಳಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭಯಾನಕ ಕೃತ್ಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕು ವರ್ಷಗಳಲ್ಲಿ ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿರುವ ಬೊಂಟಾ ಲಕ್ಷ್ಮೀ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 2ರಂದು ಜನಿಸಿದ್ದ ಮೂರನೇ ಹೆಣ್ಣು ಮಗುವನ್ನೂ ಕೊಂದ ಬಳಿಕ ಈಕೆಯ ಕೃತ್ಯ ಬೆಳಕಿಗೆ ಬಂದಿದೆ.
ಆರೋಗ್ಯ ಕಾರ್ಯಕರ್ತೆ ಸ್ವಪ್ನಾ ಎಂಬಾಕೆ ಬೊಂಟಾ ಲಕ್ಷ್ಮೀ ಮನೆಗೆ ಭೇಟಿ ನೀಡಿದ್ದ ವೇಳೆ ಹಸುಗೂಸಿನ ಬಾಯಲ್ಲಿ ನೊರೆ ಕಾಣಿಸಿತ್ತು. ಕೂಡಲೇ ಮಗುವನ್ನು ಗುಂಟೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಲ ದಿನಗಳ ಬಳಿಕ ಮಗುವಿನ ಆರೋಗ್ಯ ವಿಚಾರಿಸಲು ಬಂದ ಸ್ವಪ್ನಾ ಬಳಿ, ಮಗು ಮೃತಪಟ್ಟಿರುವುದಾಗಿ ಲಕ್ಷ್ಮೀ ತಿಳಿಸಿದ್ದರು. ಆದರೆ ಆಕೆಯ ನಡವಳಿಕೆಯಿಂದ ಸಂಶಯಗೊಂಡ ಸ್ವಪ್ನಾ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು.
ಬೊಂಟಾ ಲಕ್ಷ್ಮೀಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಈಕೆಯ ಮಾತುಗಳನ್ನು ಕೇಳಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಗಂಡು ಮಕ್ಕಳ ಮೇಲಿನ ವ್ಯಾಮೋಹದಿಂದಾಗಿ, ತನ್ನ ಮೂವರು ಹೆಣ್ಣು ಮಕ್ಕಳನ್ನು, ಜನಿಸಿದ ಕೆಲ ದಿನಗಳಲ್ಲೇ ಕೊಲೆ ಮಾಡಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ 302 (ಕೊಲೆ), 201 (ಸಾಕ್ಷಿಗಳ ನಾಶ) ಸೆಕ್ಷನ್’ಗಳ ಅಡಿಯಲ್ಲಿ ಬೊಂಟಾ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.