ಬೆಂಗಳೂರು: ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಪಂಜಾಬ್ ಮೂಲದ ಮಹಿಳೆಯೊಬ್ಬರನ್ನು ಮಹಿಳೆಯರ ಗುಂಪೊಂದು ನಿಂದಿಸಿ, ಥಳಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದ ಸರ್ಕಾರಿ ಶಾಲೆಯ ಬಳಿ ನಡೆದಿದೆ.
ನೀಲಂಜಿತ್ ಕೌರ್ (46) ಥಳಿತಕ್ಕೊಳಗಾದ ಮಹಿಳೆಯಾಗಿದ್ದು, ನಗರದಲ್ಲಿ ಸಲೂನ್ ಮತ್ತು ಸ್ಪಾ ನಡೆಸುತ್ತಿದ್ದಾರೆ.
ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ 7 ವರ್ಷದ ಮಗುವನ್ನು ಉಳಿಸಿ ಮಗುವನ್ನು ಸರಿಯಾಗಿ ನೋಡಿಕೊಳ್ಳುವಂತೆ ಪಾಲಕರಿಗೆ ತಿಳಿಹೇಳಿದ್ದಕ್ಕೆ ಕೋಪಗೊಂಡ ಮಹಿಳೆಯರ ಗುಂಪೊಂದು ಕೌರ್ ಗೆ ಕನ್ನಡ ಗೊತ್ತಿಲ್ಲ ಎಂದು ನಿಂದಿಸಲು ಆರಂಭಿಸಿದೆ. ನಂತರ ಮಾತಿಗೆ ಮಾತು ಬೆಳೆದು ಮಹಿಳೆಯರು ಕೌರ್ ಅವರನ್ನು ಥಳಿಸಿದ್ದಾರೆ. ಅಲ್ಲದೆ, ರಾಜ್ಯ ಬಿಟ್ಟು ಹೋಗುವಂತೆ ಹೇಳಿದ್ದಾರೆ.
ಇದರಿಂದ ಬೇಸರಗೊಂಡ ಮಹಿಳೆ ತನ್ನನ್ನು ಹಿಂಬಾಲಿಸಿಕೊಂಡು ಬಂದು ಪ್ಲಾಸ್ಟಿಕ್ ಪೈಪ್ ನಿಂದ ಥಳಿಸಿರುವ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯರು ಥಳಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧ ಇದುವರಗೆ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ. ಯಾರಾದರು ತಪ್ಪಿತಸ್ಥರೆಂದು ತಿಳಿದುಬಂದರೆ ಶಿಕ್ಷೆ ನೀಡಲಾಗುತ್ತದೆ ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), ಐಪಿಸಿ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಐಪಿಸಿ 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.