ಕೇಪ್ ಕೆನವೆರಲ್: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಮಂಗಳವಾರ ಭೂಮಿಗೆ ಮರಳಿದ್ದು, 9 ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ.
ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಗೊಂಡಿತ್ತು.
ಕೇವಲ ಒಂದು ವಾರದ ಮಟ್ಟಿಗೆ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ, ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು.
ಹಾಗಾಗಿ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವುದನ್ನು ಕಾಯಲಾಗುತ್ತಿತ್ತು. ಈ ಕಾಯುವಿಕೆ ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ.
ಇದಲ್ಲದೆ, ಜೂನ್ 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡಾ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿಗೆ ಮರಳಿದ್ದಾರೆ.
ಐಎಸ್‌ಎಸ್ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು.ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.
ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.