ನವದೆಹಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಕುರಿತ ಚರ್ಚೆ ವೇಳೆ, ತಮ್ಮ ಕುಟುಂಬ ವಕ್ಫ್ ಆಸ್ತಿ ಕಬಳಿಸಿದೆ ಗಂಭೀರ ಆರೋಪಗಳನ್ನು ಮಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. ನನ್ನ ಮೇಲಿನ ಆರೋಪ ಸಾಬೀತುಪಡಿಸಿದರೆ ನಾನು ರಾಜೀನಾಮೆ ನೀಡುವೆ, ಸಾಬೀತುಪಡಿಸಲಾಗದೇ ಹೋದಲ್ಲಿ ಸಚಿವ ರಾಕೂರ್ ರಾಜೀನಾಮೆ ನೀಡಬೇಕು ಎಂದು ಖರ್ಗೆ ಆಗ್ರಹ ಮಾಡಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಠಾಕೂರ್, ‘ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ದೇವಸ್ಥಾನಗಳಿಂದ ವಾರ್ಷಿಕ 450 ಕೋಟಿ ರು. ಸಂಗ್ರಹವಾಗುತ್ತದೆ. ಆದರೆ ಅದನ್ನು ಎಲ್ಲಿ ಖರ್ಚು ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಬೇಕು. ಹೀಗೆ ಎಂದಾದರೂ ಮಸೀದಿ ಅಥವಾ ವಕ್ಫ್ ಮಂಡಳಿಯ ಹಣ ತೆಗೆದುಕೊಂಡಿದ್ದೀರಾ? ಕರ್ನಾಟಕದಲ್ಲಿ ವಕ್ಫ್ ಆಸ್ತಿಯನ್ನು ಅನೇಕ ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ. ಕರ್ನಾಟಕದಲ್ಲಿ ನಡೆದ ಭೂ ಅಕ್ರಮದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರ (ಖರ್ಗೆ) ಹೆಸರೂ ಕೇಳಿಬರುತ್ತಿದೆ’ ಎಂದು ಆರೋಪಿಸಿದ್ದರು.
ಈ ಕುರಿತು ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ‘60 ವರ್ಷದ ರಾಜಕೀಯ ಜೀವನದಲ್ಲಿ ಯಾರೂ ಹೀಗೆ ನನ್ನತ್ತ ಬೆರಳು ತೋರಿಸಿಲ್ಲ. ನಿನ್ನೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಯಿತು. ಬಳಿಕ ಠಾಕೂರ್ ತಮ್ಮ ಹೇಳಿಕೆಯನ್ನು ಹಿಂಪಡೆದರಾದರೂ ಅದು ಎಲ್ಲೆಡೆ ಪ್ರಸಾರವಾಗಿದೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಅಂತೆಯೇ, ‘ನಾನು ಸಂಸದರಿಂದ ಕ್ಷಮೆ ಬಯಸುತ್ತೇನೆ. ಠಾಕೂರ್ ಮಾಡಿದ ಆರೋಪ ಸಾಬೀತುಪಡಿಸಲು ಆಗದಿದ್ದಲ್ಲಿ ಅವರು ಸಂಸತ್ತಿನಲ್ಲಿರಲು ಅರ್ಹರಲ್ಲಿ. ಒಂದೊಮ್ಮೆ ಅದು ಸಾಬೀತಾದಲ್ಲಿ ನಾನು ರಾಜೀನಾಮೆ ನೀಡುವೆ. ನಾನೆಂದೂ ಬಾಗುವುದಿಲ್ಲ’ ಎಂದರು.