Home ಟಾಪ್ ಸುದ್ದಿಗಳು ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು; ಸಿದ್ದರಾಮಯ್ಯ ಪುನರುಚ್ಚಾರ

ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು; ಸಿದ್ದರಾಮಯ್ಯ ಪುನರುಚ್ಚಾರ

ಮೈಸೂರು : ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿಕಾರಕ್ಕಾಗಿ ಯಾರೂ ಪಕ್ಷಕ್ಕೆ ಬರಬಾರದು. ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


ಕೆಪಿಸಿಸಿಯ ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ, ಸಹಾಯ ಹಸ್ತ, ಸೈಕಲ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಗ್ರೆಸ್ ಎಂದರೆ ಒಂದು ಚಳವಳಿ, ಬಡವರ ಪಕ್ಷ. ನಾವು ನೊಂದವರ ಪರ. ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ. ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ. 17 ಶಾಸಕರನ್ನು ಖರೀದಿಸಿ ಸರಕಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಕೊರೊನಾ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಬರುವ ಮಾಹಿತಿ ಇದೆ. ಒಂದು, ಎರಡನೇ ಅಲೆಯಲ್ಲಿ ನಮಗೇನೂ ಆಗಿಲ್ಲ ಎಂದು ಜನ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡಬಾರದು. ಇದು ದೊಡ್ಡ ಸಾಂಕ್ರಾಮಿಕ ರೋಗ. ಅದರಿಂದ ದೂರ ಇರಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.


ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಡು ಹೆಚ್ಚು ಜನ ಮರಣ ಹೊಂದಿದ್ದಾರೆ. ಮೂರೂವರೆ ಲಕ್ಷ ಮಂದಿ ಸತ್ತಿರಬಹುದು. ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಬರುತ್ತದೆ ಎಂದರೆ ಕೆಟ್ಟ ದಿನಗಳು ಮುಂದೆ ಕಾದಿವೆ ಎಂದು ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿ ಮತ್ತು ಅವರ ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ. ಯಡಿಯೂರಪ್ಪ ಅವರು ಈಗಾಗಲೇ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.


ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು. ಬಿಜೆಪಿ ಎಂದರೆ ತಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ. ಆದರೆ ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ ಎಂದರು.

Join Whatsapp
Exit mobile version