ಉಡುಪಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿ ಕೆ ಶಿವಕುಮಾರ್ ಬಣಗಳ ನಡುವಿನ ಕದನ, ಭಿನ್ನಮತ ಆಗಾಗ ಹೊರಬರುತ್ತಲೇ ಇದೆ. ತಮ್ಮ ನಾಯಕರು ಮುಖ್ಯಮಂತ್ರಿಯಾಗಬೇಕೆಂದು ಕಿತ್ತಾಟ ನಡೆಸುತ್ತಿದ್ದಾರೆ. ಅದೀಗ ಮತ್ತೊಮ್ಮೆ ಹೊರಬಂದಿದೆ.
ನಿನ್ನೆ ಮತ್ತು ಮೊನ್ನೆ ಉಡುಪಿಯ ಮೀನುಗಾರರ ಬಳಿ ಬಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕಷ್ಟಗಳನ್ನು ಆಲಿಸಿದ್ದರು. ಇಂದು ಮೀನುಗಾರರನ್ನು ಭೇಟಿ ಮಾಡಿದ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಡಿ ಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಮುಖ್ಯಮಂತ್ರಿಯಾಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆಲ್ಲಾ ಡಿ ಕೆ ಶಿವಕುಮಾರ್ ಅವರು ಸಹಾಯ ಮಾಡುತ್ತಾರೆ, ಅದಕ್ಕೆ ನೀವು ಮಾಡಬೇಕಾಗಿರುವುದು ಕಾಂಗ್ರೆಸ್ ನ್ನು ಬೆಂಬಲಿಸುವುದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಬೆಂಬಲಿಸಿ ಅಧಿಕಾರಕ್ಕೆ ತನ್ನಿ, ಆಗ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ, ನಿಮಗೆ ಸಹಾಯ ಮಾಡುತ್ತಾರೆ ಎಂದರು. ಇದಕ್ಕೆ ಸಿದ್ದರಾಮಯ್ಯ ಬಣ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ.