ಬೆಂಗಳೂರು: ಸರ್ಕಾರ ಎಸ್ ಡಿಪಿಐ ಮತ್ತು ಪಿಎಫ್ ಐ ನಿಷೇಧಿಸುವ ಬದಲು ಆರ್ ಎಸ್‌ಎಸ್ ಮತ್ತು ಬಜರಂಗದಳವನ್ನು ಮೊದಲು ನಿಷೇಧಿಸಲಿ. ಇದುವರೆಗೂ ಶಾಂತಿ, ಸಮನ್ವಯತೆಯಿಂದ ಇದ್ದ ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದು ಯಾರು?, ಹಲಾಲ್ ವಿಚಾರವಾಗಿ ಗೊಂದಲ ಸೃಷ್ಟಿಸುತ್ತಿರುವವರು ಯಾರು?, ಇವುಗಳಿಗೆ ಕಾರಣವಾಗಿರುವ ಆರ್ ಎಸ್ ಎಸ್ ಮತ್ತು ಬಜರಂಗದಳವನ್ನು ಮೊದಲು ನಿಷೇಧಿಸಬೇಕು ಎಂದು ಚಾಮರಾಜಪೇಟೆ ಶಾಸಕ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.
ಇಂದು ತಮ್ಮ ಚಾಮರಾಜಪೇಟೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ 4ರಂದು ಘೋಷಣೆ ಮಾಡಿರುವ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರಿಗೆ 3200 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದರು. ಆದರೆ, ಇದೀಗ ಬಿಜೆಪಿ ಸರ್ಕಾರ ಬಜೆಟ್ ನ್ನು 1150 ಕೋಟಿ ರೂಪಾಯಿಗೆ ಇಳಿಸಿದೆ. ಅದಕ್ಕಾಗಿ ಮುಸ್ಲಿಂ ನಾಯಕರೆಲ್ಲರೂ ಸೇರಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರನ್ನು ಭೇಟಿ ಮಾಡಿ ಅಲ್ಪಸಂಖ್ಯಾತರ ಬಜೆಟ್ ಮೊತ್ತ ಇಳಿಕೆ ಮಾಡದಂತೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಮುಂದುವರಿದು ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು, ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಜೋರಾಗಿ ಧ್ವನಿ ವರ್ಧಕಗಳನ್ನು ಬಳಸದಂತೆ ನ್ಯಾಯಾಲಯದ ಆದೇಶವಿದೆ. ಆ ಪ್ರಕಾರ, ಮಸೀದಿಗಳಲ್ಲಿ 10 ಡೆಸಿಬಲ್ ಗಿಂತ ಕಡಿಮೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಆದರೆ, ಬಿಜೆಪಿ ಸರ್ಕಾರ ನಮ್ಮ ಬಾಂಧವ್ಯದ ಮಧ್ಯೆ ಒಡಕು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು, ಹಿಜಾಬ್ ಆಯಿತು. ಇದೀಗ ಹಲಾಲ್ ವಿಚಾರ ಎಳೆದು ತಂದು ಇಲ್ಲದ ಗೊಂದಲ ಸೃಷ್ಟಿಸಿ ಸರ್ಕಾರ ಏನು ಸಾಧಿಸಲು ಹೊರಟಿದೆ ಎಂದರು.
ಇದರಿಂದ ಬಡ ವ್ಯಾಪಾರಿಗಳಿಗೆ ಆಗುವ ನಷ್ಟ ಭರಿಸುವವರು ಯಾರು ಎಂದು ಶಾಸಕ ಜಮೀರ್ ಪ್ರಶ್ನಿಸಿದರು.
ಇದೇ ವೇಳೆ, ಜಾತಿ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ಹೂಡಿಕೆದಾರರು ರಾಜ್ಯದಲ್ಲಿ ಹಣ ಹೂಡಿಕೆ ಮಾಡಲು ಮುಂದೆ ಬರುವುದಿಲ್ಲ. ಇದರಿಂದ ರಾಜ್ಯವು ಆರ್ಥಿಕವಾಗಿ ಹಿಂದೆ ಉಳಿಯುತ್ತದೆ ಎಂದು ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್ ಬಗ್ಗೆ ಉಲ್ಲೇಖಿಸಿದ ಅವರು, ಇನ್ನಾದರೂ ಈ ಜಾತಿ ರಾಜಕಾರಣ ಬಿಟ್ಟು ಎಲ್ಲರೂ ಜೊತೆಯಾಗಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಮಾಡೋಣ ಎಂದರು.