ನಟ ಪ್ರಕಾಶ್ ರಾಜ್ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್ ಪ್ರಶ್ನೆ

- Advertisement -

ಬೆಂಗಳೂರು: ನಟ ಪ್ರಕಾಶ್ ರಾಜ್ ಬೇರೆ ಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು.

- Advertisement -

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರಾಜ್​ಗೆ ಗೊತ್ತಿರಲಿಕ್ಕಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ. ಪ್ರಕಾಶ್ ರಾಜ್ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆ ಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಕುಟುಕಿದ್ದಾರೆ.

ನಮ್ಮಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪಕ್ಕದ ಆಂಧ್ರ ಪ್ರದೇಶದಲ್ಲಿ ಇದೇ ಉದ್ದೇಶಕ್ಕಾಗಿ ನಮ್ಮ ಗಡಿಗೇ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಹೇಳಲಾಗುತ್ತಿದೆ. ಅಲ್ಲದೇ, ಆಂಧ್ರದಲ್ಲಿ ಬೇರೆ ಬೇರೆ ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ ಬರೀ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಪ್ರಕಾಶ್ ರಾಜ್​ಗೆ ಇವೆಲ್ಲ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

- Advertisement -


Must Read

Related Articles