ತಿರುವನಂತಪುರಂ: ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲು ಎಲ್‌ಡಿಎಫ್‌ಗೆ ಕಾಂಗ್ರೆಸ್‌ನಿಂದ ಪ್ರಮಾಣಪತ್ರದ ಅಗತ್ಯವಿಲ್ಲ. ಗೋಳ್ವಾಲ್ಕರ್ ಭಾವಚಿತ್ರದ ಮುಂದೆ ದೀಪ ಹಚ್ಚಿ, ಆರ್‌ಎಸ್‌ಎಸ್‌ಗೆ ಮನವಿ ಮಾಡಿ ಮತ ಯಾಚಿಸಿದವರು ನಮಗೆ ಉಪನ್ಯಾಸ ನೀಡಬಾರದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಸಿಎಎ ಮೂಲಕ ಬಿಜೆಪಿ ಆರ್‌ಎಸ್‌ಎಸ್ ಅಜೆಂಡಾವನ್ನು ಜಾರಿಗೆ ತರುತ್ತಿದೆ. ಸಿಎಎ ವಿರುದ್ಧ ಹೋರಾಟ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. 2019ರಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರನ್ನು ಬಂಧಿಸಲಾಯಿತು. ಆ ಬಂಧಿತರ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರನ್ನ ಯಾರಾದರೂ ನೋಡಿದ್ದೀರಾ? ಎಂದು ಕೇರಳ ಸಿಎಂ ಪ್ರಶ್ನಿಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ಅನ್ನು ಮಾತ್ರವೇ ಟೀಕಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ನನ್ನ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು. ಸಿಎಎ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಿಂದ ದೂರ ಉಳಿದಿದ್ದು ಏಕೆ? ಎಂದು ಕೇಳಿದ್ದಾರೆ.
ಪಾಲಕ್ಕಾಡ್‌ನಲ್ಲಿ ಯುಡಿಎಫ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಾನು ಹೋದ ಪ್ರತಿಯೊಂದು ರಾಜ್ಯದಲ್ಲೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತೇನೆ. ಆದರೆ, ಕೇರಳ ಸಿಎಂ ತಮ್ಮ ಇಡೀ ಸಮಯವನ್ನು ನನ್ನ ಮೇಲೆ ದಾಳಿ ಮಾಡುವುದರಲ್ಲೇ ಕಳೆಯುತ್ತಾರೆ. ಅವರು ಬಿಜೆಪಿ ವಿರುದ್ಧ ಒಂದೇ ಒಂದು ಮಾತನ್ನಾಡುವುದಿಲ್ಲ. ಈ ಬಗ್ಗೆ ನೀವೇ ಯೋಚಿಸಬೇಕು ಎಂದು ಹೇಳಿದ್ದರು.