►SDPI ಮೇಲಿನ ದಾಳಿಯಿಂದ ಪೊಲೀಸ್ ಕಮಿಷನರ್ ಗೆ ಏನೋ ಲಾಭ ಇದೆ ಎಂದ ರಾಜ್ಯ ನಾಯಕರು
ಮಂಗಳೂರು: ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ SDPI ನಾಯಕರ ಮನೆ ಮೇಲೆ ದಾಳಿ ಮಾಡಿ, ಕೆಲವರನ್ನು ರಾತ್ರೋರಾತ್ರಿ ಬಂಧಿಸಲಾಗಿದೆ. ಪೊಲೀಸರ ಈ ನಡೆಯನ್ನು ಖಂಡಿಸಿದ SDPI ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ನಮ್ಮ ನಾಯಕರನ್ನು ಬಂಧಿಸಲು ಒತ್ತಡ ಹಾಕಿದ ನಿಗೂಢ ಶಕ್ತಿಗಳು ಯಾರು ಎಂದು ಕಮಿಷನರ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, PFI ಮೇಲಿನ ಪ್ರಕರಣದ ನೆಪದಲ್ಲಿ SDPI ಜಿಲ್ಲಾಧ್ಯಕ್ಷರ ಸಹಿತ ಹಲವು ನಾಯಕರ ಮನೆಗೆ ದಾಳಿ ನಡೆಸಲಾಗಿದೆ. ಕೆಲವರನ್ನು ಬಂಧಿಸಲಾಗಿದೆ. ಯಾಕೆ ಈ ಬಂಧನ ಎಂದು ಪೊಲೀಸರಲ್ಲಿ ಪ್ರಶ್ನಿಸಿದರೆ, ನಮಗೆ ಒತ್ತಡ ಇದೆ ಎನ್ನುತ್ತಾರೆ. ಯಾರ ಒತ್ತಡ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ ಎಂದು ಟೀಕಿಸಿದರು. ನಮ್ಮ ನಾಯಕರ ಮನೆಗೆ ದಾಳಿ ಯಾಕೆ ಎಂದು ಕೇಳಿದರೆ ನೀವು ಹೆಸರಿಸಿದ ಯಾರ ಮೇಲೂ ದಾಳಿ ನಡೆದಿಲ್ಲ ಎಂದು ಮಂಗಳೂರು ಕಮೀಷನರ್ ಟ್ವೀಟ್ ಮಾಡುತ್ತಾರೆ. ಆದರೆ FIR ಕಾಪಿ ಹಾಕಿದರೆ ಉತ್ತರವಿಲ್ಲ ಎಂದು ಹೇಳಿದರು.
ಬಿಜೆಪಿಯನ್ನು ಎದುರಿಸುತ್ತಿರುವ ಶಕ್ತಿಗಳನ್ನು ದಮನಿಸಲು ಪೊಲೀಸರಿಂದ ಈ ರೀತಿಯ ದಾಳಿ ಮಾಡಿಸುತ್ತಿದ್ದಾರೆ. ಊಹಾಪೋಹ ಕಥೆ ಕಟ್ಟಿ ಕರಾಳ ದೇಶದ್ರೋಹದ ಕೇಸ್ ದಾಖಲಿಸುತ್ತಿದ್ದಾರೆ. ಪೊಲೀಸರು 12 ಕಡೆ ದಾಳಿ ಮಾಡಿದ್ದು, ಅದರಲ್ಲಿ 6 SDPI ನಾಯಕರ ಮನೆ ಮೇಲೆ ದಾಳಿ ನಡೆದಿದೆ ಮತ್ತು SDPI ಅಸಂಬ್ಲಿ ಸಮಿತಿ ಸದಸ್ಯರಾದ ಅಬ್ಬಾಸ್ ಕಿನ್ಯ ಹಾಗೂ ಇನ್ಫರ್ಮೇಶನ್ ಸೆಂಟರ್ ನ ಸಿಬ್ಬಂದಿ ಬಿಲಾಲ್ ಎಂಬವರನ್ನು ಬಂಧಿಸಿದ್ದಾರೆ. PFI ಬ್ಯಾನ್ ಆದಾಗ SDPI ಯ ಎಂಟು ಕಚೇರಿಗೆ ಬೀಗ ಹಾಕಿದ್ದಾರೆ. ಅದರಲ್ಲಿ ಮಂಗಳೂರಿನ 2 ಕಾರ್ಪೋರೇಟರ್ ಆಫೀಸ್ ಮತ್ತು ಬಂಟ್ವಾಳದ ಕೌನ್ಸಿಲ್ ಆಫೀಸ್ ಜೊತೆಗೆ 7 ಇಂಫರ್ಮೇಶನ್ ಸೆಂಟರ್ ಸೇರಿದೆ. ಇದಕ್ಕೆಲ್ಲಾ ಆದೇಶ ಎಲ್ಲಿಂದ ಬಂತು ಎಂದು ಮಂಗಳೂರು ಕಮಿಷನರ್ ಬಹಿರಂಗಪಡಿಸಬೇಕು ಎಂದು ಅಶ್ರಫ್ ಮಾಚಾರ್ ಆಗ್ರಹಿಸಿದರು.
ಸಿಸಿಬಿಯ ಮಹೇಶ್ ಕುಮಾರ್ ದೈವ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ – ಅಲ್ಫಾನ್ಸೋ ಫ್ರಾಂಕೊ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ ಮಾತನಾಡಿ, ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಕರ್ನಾಟಕ ಡಿಜಿಪಿ ಅವರನ್ನು ಧರ್ಮಸ್ಥಳಕ್ಕೆ ಆಣೆ ಹಾಕಲು ಕರೆದಿದ್ದಾರೆ. ನಾನು ಇಲ್ಲಿ ಕೇಸು ದಾಖಲಿಸಿದ ಸಿಸಿಬಿ ಮಹೇಶ ಕುಮಾರ್ ಅವರನ್ನು ಕರೆಯುತ್ತೇನೆ. ನಿಮಗೆ ಮನಸಾಕ್ಷಿಯಿದ್ದರೆ ಪ್ರಮಾಣ ಮಾಡಲು ದೈವ ಸನ್ನಿಧಿಗೆ ಬನ್ನಿ ಎಂದು ಸವಾಲು ಹಾಕಿದರು.
SDPI ಮೇಲಿನ ದಾಳಿಯಿಂದ ಕಮಿಷನರ್ ಗೆ ಏನೋ ಲಾಭ ಇದೆ- ರಿಯಾಝ್ ಕಡಂಬು
ರಾಜ್ಯ ಮಾಧ್ಯಮ ಸಂಯೋಜಕ ರಿಯಾಝ್ ಕಡಂಬು ಮಾತನಾಡಿ, ಡಿಜಿಪಿ ಅಲೋಕ್ ಕುಮಾರ್ ಇವೆಲ್ಲಾ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳ್ತಾರೆ ಎಂದಾದರೆ ಮಂಗಳೂರು ಕಮಿಷನರ್ ಗೆ ಆದೇಶ ಕೊಟ್ಟವರು ಯಾರು? ಯಾಕೆ ದಕ್ಷಿಣ ಕನ್ನಡದಲ್ಲಿ ಮಾತ್ರ ದಾಳಿ ನಡೀತಿದೆ? ಶಶಿಕುಮಾರ್ ಏನೋ ಸಾಧಿಸಲು ಹೊರಟಿದ್ದಾರೆ. ಅವರಿಗೇನೋ ಇದರಿಂದ ಲಾಭ ಇದೆ. ಆದ್ದರಿಂದ ಶಶಿಕುಮಾರ್ ಸುಳ್ಳು ಕೇಸ್ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಿಮಗೆ ಧಮ್ ಇದ್ದರೆ ನಮ್ಮನ್ನು ಚುನಾವಣೆಯಲ್ಲಿ ಎದುರಿಸಿ. ಅದು ಬಿಟ್ಟು ಇಂತಹ ಕಳ್ಳಾಟ ಯಾಕೆ? ಹೆಲ್ಮೆಟ್ ಹಿಡಿದರೂ ಸುದ್ದಿಗೋಷ್ಠಿ ಮಾಡುವ ಶಶಿಕುಮಾರ್ ಈ ಬಗ್ಗೆ ಯಾಕೆ ಪ್ರೆಸ್ ಮೀಟ್ ಮಾಡಲಿಲ್ಲ? ನಾವು ದಾಳಿ ಮಾಡಿಲ್ಲ ಎಂದು ಸುಳ್ಳು ಯಾಕೆ ಹೇಳ್ತಾರೆ? ಇಂತಹ ಕಣ್ಣಾಮುಚ್ಚಾಲೆ ಆಟ ಯಾಕೆ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗೂ ಒತ್ತಡ ಇದೆಯಂತೆ- ಅನ್ವರ್ ಸಾದಾತ್ ಬಜತ್ತೂರು
ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ, ಈ ಮುಂಚೆ 107 ಕಲಂ ಅಡಿಯಲ್ಲಿ ಹಲವು ನಾಯಕರನ್ನು ಬಂಧಿಸಿದಾಗ ಆ ಪ್ರಕರಣದಲ್ಲಿ ಜಾಮೀನು ನೀಡುವ ಸಂಪೂರ್ಣ ಅಧಿಕಾರ ಜಿಲ್ಲಾಧಿಕಾರಿಗೆ ಇದ್ದರೂ ಜಾಮೀನು ನೀಡದೆ ಸತಾಯಿಸಿದ್ದಾರೆ. ಪ್ರಶ್ನಿಸಿದರೆ ನನಗೂ ಒತ್ತಡ ಇದೆ ಎನ್ನುತ್ತಾರೆ. ಒಟ್ಟಿನಲ್ಲಿ ಇವರಿಗೆ SDPI ಮೇಲೆ ದಾಳಿ ಮಾಡಲು ಒತ್ತಡ ಹೇರುವವರು ಯಾರು ಎಂದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.